ಯಾದಗಿರಿ: 'ಶ್ರೀರಾಮುಲು ಡೆಪ್ಯುಟಿ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ ಮಸ್ಟ್ ಕಂಪಲ್ಸರಿ' ಎಂದು ಪತ್ರ ಬರೆದು ಶಕ್ತಿ ದೇವಿ ಸನ್ನಿಧಿಯಲ್ಲಿಡುವ ಮೂಲಕ ಸಚಿವ ಶ್ರೀರಾಮುಲು ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಜಿಲ್ಲೆಯ ಗಡೇದುರ್ಗಾ ದೇವಿಗೆ ಮೊರೆ ಹೋಗಿದ್ದಾರೆ. ಈ ಕುರಿತು ಸ್ವತಃ ಶ್ರೀರಾಮುಲು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಕಲ್ಯಾಣ ಕರ್ನಾಟಕ ಉತ್ಸವದ ಧ್ವಜಾರೋಹಣ ನೆರವೇರಿಸಲು ಯಾದಗಿರಿ ಜಿಲ್ಲೆಗೆ ಆಗಮಿಸಿದ ಅವರು ನೇರವಾಗಿ ಗಡೇ ದುರ್ಗಾದೇವಿ ದರ್ಶನಕ್ಕೆ ತೆರಳಿದ್ದರು. ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಳ ಗ್ರಾಮದ ಗಡೇ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಸಚಿವ ಶ್ರೀರಾಮುಲು ದುರ್ಗಾದೇವಿ ದರ್ಶನ ಪಡೆದು 'ಶ್ರೀರಾಮುಲು ಡೆಪ್ಯುಟಿ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ ಮಸ್ಟ್' ಕಂಪಲ್ಸರಿ ಅಂತ ಪತ್ರ ಬರೆದು ದೇವಿ ಸನ್ನಿಧಿಯಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ದೇವಿ ಬಳಿ ಕೇಳಿಕೊಂಡಿರುವ ಬಗ್ಗೆ ಬಹಿರಂಗಪಡಿಸಬಾರದು, ನನ್ನ ಮನಸ್ಸಿನಲ್ಲಿರುವುದು ದೇವಿ ಬಳಿ ಬೇಡಿಕೊಂಡಿದ್ದೇನೆ. ಈಗ ಆ ಪತ್ರ ಬಹಿರಂಗವಾಗಿದೆ. ನನ್ನ ಸ್ನೇಹಿತರೊಬ್ಬರು ದೇವಿ ದರ್ಶನ ಪಡೆದರೆ ಒಳ್ಳೆಯದಾಗುತ್ತೆ ಅಂತ ಹೇಳಿದ್ರು. ಅದಕ್ಕಾಗಿ ದರ್ಶನ ಪಡೆದಿದ್ದೇನೆ. ಕೋವಿಡ್ ಇದ್ದ ಕಾರಣ ಈ ಸಂದರ್ಭದಲ್ಲಿ ಡಿಸಿಎಂ ಸ್ಥಾನದ ಕುರಿತು ಮಾತನಾಡಲು ನಾನು ಬಯಸುವುದಿಲ್ಲ" ಎಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟ ಸಭೆ ವಿಸ್ತರಣೆಗಾಗಿ ದೆಹಲಿಗೆ ತೆರಳಿಲ್ಲ. ಬೇರೆ ಕೆಲಸದ ನಿಮಿತ್ತ ಹೋಗಿದ್ದಾರೆ. ನನಗೆ ಡಿಸಿಎಂ ನೀಡೋದು ಬಿಡೋದು ಸಿಎಂ ಬಿಎಸ್ವೈ ಅವರ ವಿವೇಚನಕ್ಕೆ ಬಿಟ್ಟ ವಿಚಾರ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಹ ಈ ಹಿಂದೆ ಜಾರಿ ನಿರ್ದೇಶನಾಲಯದ ಸಂಕಷ್ಟಕ್ಕೆ ಸಿಲುಕಿದಾಗ ಗಡೇ ದುರ್ಗಾದೇವಿ ಮೊರೆ ಹೋಗಿದ್ದರು. ಕೊಟ್ಟ ಮಾತಿನಂತೆ ಡಿಕೆಶಿ ಗೋನಾಳ ಗ್ರಾಮಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ವಿಶೇಷ ಪೂಜೆ ಸಲ್ಲಿಸಿದ್ದರು.