ಯಾದಗಿರಿ: ತಾಲೂಕಿನ ಠಾಣಾಗುಂದಿ ಗ್ರಾಮದಲ್ಲಿ ಕೋವಿಡ್ ಲಸಿಕೆ (COVID-19 vaccine) ಹಾಕಲು ಹೋದ ಅಧಿಕಾರಿಗಳಿಗೆ ಜನರು ಅಸಡ್ಡೆ ರೀತಿಯಲ್ಲಿ ವರ್ತಿಸಿದಾಗ, ಹೊಡಿತೀಯಾ ಹೊಡಿ, ಬಡಿತೀಯಾ ಬಡಿ ಆದರೆ ವ್ಯಾಕ್ಸಿನ್ ತಗೊಳ್ಳಿ ಎಂದು ಅಧಿಕಾರಿಗಳು ಜನರ ಮನವೊಲಿಸಲು ಪ್ರಯತ್ನಿಸಿದ್ದಾರೆ.
ಠಾಣಾಗುಂದಿ ಗ್ರಾಮಕ್ಕೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Ministry of Women and Child Development) ಅಧಿಕಾರಿ ಪ್ರಭಾಕರ್, ಕವಿತಾ ಅವರಿಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಅಂದ್ರೆ ನನಗೆ ಸಾರಾಯಿ ಕುಡಿಯಲು ಹಣ ಕೊಡಬೇಕು ಎಂದು ಕುಡುಕನೊಬ್ಬ ಬೇಡಿಕೆ ಇಟ್ಟನು. ನಂತರ ಅಧಿಕಾರಿ, ಕುಡುಕ ಮಹಾಶಯನಿಗೆ 20 ರೂ. ಕೊಟ್ಟು ಸಮಾಧಾನ ಮಾಡಿದ ಪ್ರಸಂಗ ನಡೆಯಿತು.
ವೃದ್ಧನೊಬ್ಬ ಸೌದೆ ಒಡೆಯುವ ವೇಳೆ ಲಸಿಕೆ ಹಾಕಲು ಸಿಬ್ಬಂದಿ ಮುಂದಾದಾಗ, ಕೈಯಲ್ಲಿ ಕೊಡಲಿ ಹಿಡಿದು ತನ್ನದೇ ಭಾಷೆಯಲ್ಲಿ ಅಧಿಕಾರಿಗಳಿಗೆ ಥಳಿಸಿದ್ದಾನೆ. ಮತ್ತೊಂದು ಕಡೆ ಅಧಿಕಾರಿಗಳು ಜನರ ಮನೆಗೆ ಹೋದರೆ, ಕೆಲವರು ಬಾಗಿಲು ಮುಚ್ಚಿಕೊಂಡು ಲಸಿಕೆ ತೆಗೆದುಕೊಳ್ಳುವುದಿಲ್ಲ ಎಂದು ಪಟ್ಟುಹಿಯುತ್ತಿದ್ದಾರೆ.
ಜನರಿಗೆ ಅರ್ಥವಾಗುವ ರೀತಿಯಲ್ಲಿ ಲಸಿಕೆ ಬಗ್ಗೆ ಅಧಿಕಾರಿಗಳು, ಸಿಬ್ಬಂದಿ ಅರಿವು ಮೂಡಿಸುತ್ತಿದ್ದರೂ ಗ್ರಾಮೀಣ ಭಾಗದಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.