ಸುರಪುರ: ಬೆಳಗಾವಿ ಜಿಲ್ಲೆಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಯುವ ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು. ನಗರದ ತಹಶೀಲ್ದಾರರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದು, ಇದರ ನೇತೃತ್ವವನ್ನು ಯುವ ಘಟಕದ ಜಿಲ್ಲಾಧ್ಯಕ್ಷ ಮಲ್ಲು ದಂಡಿನ್ ವಹಿಸಿದ್ದರು.
ಬಳಿಕ ಮಾತನಾಡಿದ ಅವರು, ಕಿತ್ತೂರು ಸಂಸ್ಥಾನದ ರಾಣಿ ಚೆನ್ನಮ್ಮನ ಬಲಗೈ ಬಂಟನಂತಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೋರಾಟದ ಫಲದಿಂದಾಗಿ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ಚಳುವಳಿ ಆರಂಭವಾಗಿದ್ದು. ಅಂತಹ ಹುತಾತ್ಮ ರಾಯಣ್ಣನ ಮೂರ್ತಿಯನ್ನು ಪೀರನವಾಡಿಯಲ್ಲಿ ಕುಂಟು ನೆಪ ಹೇಳಿ ತೆರವುಗೊಳಿಸಿರುವುದು ಸರಿಯಲ್ಲ. ಇದು ರಾಯಣ್ಣನಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನವಾಗಿದೆ ಎಂದರು.
ಸರ್ಕಾರ ಕೂಡಲೇ ಎಚ್ಚೆತ್ತು ಪೀರನವಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪನೆಗೊಳಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಕರ್ನಾಟಕ ಪ್ರದೇಶ ಕುರುಬರ ಸಂಘದ ನೇತೃತ್ವದಲ್ಲಿ ಯುವ ಘಟಕ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಶಿರಸ್ತೇದಾರ ಸೋಮನಾಥ ನಾಯಕ್ ಅವರ ಮೂಲಕ ಸಲ್ಲಿಸಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘ ಯುವ ಘಟಕದ ಗೌರವಾಧ್ಯಕ್ಷ ಚಂದ್ರು ಎಲಿಗಾರ, ಕೃಷ್ಣ ಬಾದ್ಯಾಪುರ, ಮಾರ್ಥಂಡ ಬಾದ್ಯಾಪುರ, ವಾಸು ಕೆಂಗುರಿ, ಸಿದ್ರಾಮ ಎಲಿಗಾರ, ಮಹಾರಾಜ ಬಬಲಾದಿ, ವೆಂಕಿ ಕೊಳ್ಳಿ, ಚನ್ನಪ್ಪ ಎಲಿಗಾರ, ಶಿವು ಕವಡಿಮಟ್ಟಿ ಇನ್ನಿತರರಿದ್ದರು.