ಯಾದಗಿರಿ: ನೂತನ ತಾಲ್ಲೂಕು ಕೇಂದ್ರವಾಗಿ ಮೂರು ವರ್ಷ ಕಳೆದರು ಕೂಡ ವಡಗೇರಾ ಗ್ರಾಮ ಪಂಚಾಯತ್ಅನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸದೆ ಈಗ ಮತ್ತೆ ವಡಗೇರಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೇ ಮುಂದುವರೆಸಲು ಸರ್ಕಾರ ನಿರ್ಧರಿಸಿದ್ದು, ಸರ್ಕಾರದ ಧೋರಣೆಯನ್ನು ಖಂಡಿಸಿ ಇಂದು ಇಡೀ ವಡಗೇರಾ ಪಟ್ಟಣ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ವಡಗೇರಾ ಪಟ್ಟಣ ಪಂಚಾಯಿತಿ ಹೋರಾಟ ಸಮಿತಿ ಕರೆದ ಬಂದ್ಗೆ ಪಕ್ಷಾತೀತವಾಗಿ ಸ್ಥಳೀಯ ಎಲ್ಲಾ ಪಕ್ಷದ ನಾಯಕರು ಮತ್ತು ವಿವಿಧ ಕನ್ನಡಪರ ಸಂಘಟನೆಗಳು ಸಾಥ್ ನೀಡಿದವು. ಸ್ವಯಂ ಪ್ರೇರಿತವಾಗಿ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ವ್ಯಾಪಾರಸ್ಥರು ಕೂಡ ಬಂದ್ಗೆ ಸಹಕಾರ ನೀಡಿದರು. ಪಟ್ಟಣದ ಬಸವೇಶ್ವರ ವೃತ್ತದಿಂದ ವಾಲ್ಮೀಕಿ ವೃತ್ತದವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದರು.
ಜಿಲ್ಲೆಯ ಶಹಪುರ ತಾಲ್ಲೂಕಿನಿಂದ ವಡಗೇರಾ ಪಟ್ಟಣವನ್ನು ಪ್ರತ್ಯೇಕ ತಾಲ್ಲೂಕು ಅಂತ ಘೋಷಣೆ ಮಾಡಿ ಮೂರು ವರ್ಷ ಕಳೆದರು ಕೂಡ ವಡಗೇರಾ ತಾಲ್ಲೂಕು ಕೇಂದ್ರವನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೇ ಮುಂದುವರೆಸಲು ಸರ್ಕಾರ ನಿರ್ಧರಿಸಿದ್ದು ಸರ್ಕಾರದ ಧೋರಣೆಯನ್ನು ಪ್ರತಿಭಟನೆ ಮೂಲಕ ಖಂಡಿಸಿದರು.
ಒಂದು ವೇಳೆ ಸರ್ಕಾರ ವಡಗೇರಾ ತಾಲ್ಲೂಕು ಕೇಂದ್ರವನ್ನು ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೆ ಏರಿಸದೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೆ ಮುಂದುವರೆಸಿದರೆ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕರಿಸುವ ಮೂಲಕ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.