ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಸುಮಾರು ತಿಂಗಳಾದರೂ ಹಣ ಪಾವತಿಯಾಗಿಲ್ಲ. ಇದರಿಂದ ಕೂಲಿಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಂದು ಅಥವಾ ನಾಳೆ ತಮ್ಮ ಕೂಲಿ ಸಿಗುತ್ತದೆ ಎನ್ನುವ ಭರವಸೆಯಲ್ಲಿ ಈ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ ಗ್ರಾಮ ಪಂಚಾಯತ್ ಅಧಿಕಾರಿಗಳು ಒಂದು ವಾರ ಕೆಲಸ ಕೊಟ್ಟು ನಂತರ ಕೆಲಸ ಇಲ್ಲ ಅಂತ ಜನರನ್ನು ಖಾಲಿ ಕೂರಿಸುತ್ತಿದ್ದಾರಂತೆ. ಯಾರ ಬಳಿ ಸ್ಮಾರ್ಟ್ ಫೋನ್ ಇದೆಯೋ ಅವರಷ್ಟೇ ಕೆಲಸಕ್ಕೆ ಬನ್ನಿ ಎಂದು ಹೇಳುತ್ತಿದ್ದಾರೆ. ಅಧಿಕಾರಿಗಳು ಸುಖಾಸುಮ್ಮನೆ ತೊಂದರೆ ಕೊಟ್ಟು ನಮ್ಮ ಕೂಲಿ ಕಿತ್ತುಕೊಳ್ಳುತ್ತಿದ್ದಾರೆ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ರಾಗಿ ಖರೀದಿ ನೋಂದಣಿಗೆ ಬಂದ ರೈತರ ಪರದಾಟ
ನಮ್ಮ ಸಮಸ್ಯೆ ಹೇಳಿಕೊಳ್ಳಲು ಪಿಡಿಒ ಬಳಿ ಹೋದರೆ ಅವರು ನಮ್ಮ ಕೈಗೆ ಸಿಗೋದಿಲ್ಲ. ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂದು ಜಾರಿಕೊಳ್ಳುತ್ತಾರೆ. ಏನೇ ಕೇಳಿದ್ರೂ ಸ್ಮಾರ್ಟ್ ಫೋನ್ ಮೂಲಕ ಹಾಜರಿ ಹಾಕಿ ಸಂಬಳ ತಗೋಳಿ ಎನ್ನುತ್ತಾರೆ. ಹೀಗಾಗಿ ಎಲ್ಲಾ ಕೂಲಿ ಕಾರ್ಮಿಕರು ನಗನೂರು ಪಂಚಾಯತ್ ಎದುರು ಧರಣಿಗೆ ತೆರಳಿದರೂ ಕೂಡ ಯಾರೂ ಗಮನ ಹರಿಸಿಲ್ಲ.
ಅಲ್ಲದೇ ಗ್ರಾಮದ ಹಲವರು ನಮಗೆ ಬೈದು ದಬ್ಬಾಳಿಕೆ ಮಾಡಿ ಕಳುಹಿಸಿದ್ದಾರೆ. ಹೀಗಾದರೆ ನಾವೆಲ್ಲ ಮತ್ತೆ ಗುಳೆ ಹೋಗಬೇಕು. ಸರ್ಕಾರ ನಮ್ಮಂತವರಿಗೆಂದೇ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದೆ. ಆದರೆ ಇವರು ಸರಿಯಾಗಿ ಕೆಲಸ, ಸಂಬಳ ಕೊಡದೇ ನಮ್ಮನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆಂದು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.