ಯಾದಗಿರಿ : ಈಗಾಗಲೇ ಬಿಜೆಪಿ ತನ್ನ 2ನೇ ಪಟ್ಟಿ ಬಿಡುಗಡೆ ಮಾಡಿದ್ದು, ಗುರುಮಠಕಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ನಾಗರತ್ನ ಕುಪ್ಪಿ ಅವರಿಗೆ ಟಿಕೆಟ್ ಕೈ ತಪ್ಪಿ, ಲಲಿತಾ ಅನಪೂರ ಅವರಿಗೆ ನೀಡಿದೆ. ಈ ಸಂಬಂದ ಪ್ರತಿಕ್ರಿಸಿರುವ ನಾಗರತ್ನ ಕುಪ್ಪಿ, ಕಳೆದ 20 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಕ್ರೀಯಾಶೀಲರಾಗಿ ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದೇನೆ. ಕೊನೆಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿರುವುದರಿಂದ ನನಗೆ ಮತ್ತು ಕಾರ್ಯಕರ್ತರಿಗೆ ಬೇಸರ ತಂದಿದೆ. ಹಾಗೂ ಕಳೆದ 3 ಚುನಾವಣೆಯಲ್ಲಿ ಪಕ್ಷ ಕೋಲಿ ಸಮಾಜದ ಮುಖಂಡರಿಗೆ ಆದ್ಯತೆ ನೀಡುತ್ತ ಬಂದಿದೆ ಎಂದು ತಮ್ಮ ನೋವು ಹಂಚಿಕೊಂಡು ಕಣ್ಣೀರಿಟ್ಟಿದ್ದಾರೆ.
ಯಾದಗಿರಿ ನಗರಸಭೆಯ ಮಾಜಿ ಅಧ್ಯಕ್ಷೆ ಹಾಗೂ ಕೋಲಿ ಸಮಾಜದ ನಾಯಕಿ ಲಲಿತಾ ಅನಪೂರ ಅವರನ್ನು ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸುವ ಈ ಮೂಲಕ ಜಿಲ್ಲೆಯ ನಾಲ್ಕು ಮತ ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದಂತಾಗಿದೆ. ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಗೆ ಟಿಕೆಟ್ ನೀಡಿದ್ದು, ಇದುವರೆಗೂ ಜಿಲ್ಲೆಯ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಯಾವುದೇ ಪಕ್ಷ ಮಣೆ ಹಾಕಿರಲಿಲ್ಲ. ಹೀಗಾಗಿ ಈ ಬಾರಿ ಬಿಜೆಪಿ ಮಹಿಳೆಯರಿಗೆ ಅವಕಾಶ ನೀಡಿರುವುದು ಇಲ್ಲಿನ ಚುನಾವಣೆ ವಿಶೇಷಕ್ಕೆ ಕಾರಣವಾಗಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಬಾಬುರಾವ್ ಚಿಂಚನಸೂರು ಹಾಗೂ ಜೆಡಿಎಸ್‌ನಿಂದ ಶರಣಗೌಡ ಕಂದಕೂರು ಅವರು ಸ್ಪರ್ಧಿಸುತ್ತಿದ್ದಾರೆ.
ಮಾಜಿ ಶಾಸಕ ಗುರು ಪಾಟೀಲ್ಗೆ ಟಿಕೆಟ್ ಮಿಸ್ : ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಅಭಿಮಾನಿಗಳೊಂದಿಗೆ ಮಾಜಿ ಶಾಸಕ ಗುರು ಪಾಟೀಲ್ ಅವರು ಅಭಿಮಾನಿಗಳು ಹಾಗೂ ಬೆಂಬಲಿಗರೊಂದಿಗೆ ಜಿಲ್ಲೆಯ ಶಹಾಪುರ ಮಡ್ನಾಳ ರಸ್ತೆಯಲ್ಲಿರುವ ಗೋದಾಮಿನಲ್ಲಿ ನಡೆದ ಸಭೆಯಲ್ಲಿ ಸಮಾಲೋಚಿಸಿದರು. ಸಭೆಯಲ್ಲಿ ಗುರು ಪಾಟೀಲ್‌ರೊಂದಿಗೆ ಚರ್ಚೆ ಮಾಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸ್ವಯಂತ ಪ್ರೇರಿತರಾಗಿ ಆಗಮಿಸಿದ್ದು, ಕಾರ್ಯಕರ್ತರೊಂದಿಗೆ ಮುಕ್ತವಾಗಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಕಾಯರ್ಕರ್ತರು ಚುನಾವಣೆಯಲ್ಲಿ ಸ್ವರ್ಧೆ ಮಾಡಿ ನಾವು ನಿಮ್ಮನ್ನು ಗೆಲ್ಲಿಸುತ್ತೇವೆ ಎಂದು ಹೇಳಿದರು. ಈಗಾಗಲೇ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಬಿಜೆಪಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪ್ರಾದೇಶಿಕ ಪಕ್ಷದ ರಾಜಕೀಯ ನಾಯಕರು ನನ್ನನ್ನು ಸಂಪರ್ಕ ಮಾಡಿದ್ದಾರೆ. ಒಂದು ದಿನದಲ್ಲಿ ಯಾವ ಪಕ್ಷ ಎಂಬುದು ನಿರ್ಧಾರ ಮಾಡುತ್ತೇನೆ ಎಂದು ಗುರು ಪಾಟೀಲ್ ಹೇಳಿದ್ದಾರೆ.
ಗುರುಮಠಕಲ್ ಕ್ಷೇತ್ರದಲ್ಲಿ ಮೊದಲ ನಾಮಪತ್ರ ಸಲ್ಲಿಕೆ : ಇನ್ನು ಇದೇ ಸಂದರ್ಭದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಪ್ರಥಮ ದಿನವಾದ ಇಂದು 2023ರ ಏಪ್ರಿಲ್ 13ರ ಗುರುವಾರ ರಂದು ಗುರುಮಠಕಲ್ ಮತ ಕ್ಷೇತ್ರದಿಂದ ಓರ್ವ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ವಿಧಾನಸಭೆ ಕ್ಷೇತ್ರ 39 - ಗುರುಮಠಕಲ್ ಮತ ಕ್ಷೇತ್ರದಿಂದ ಕೆಆರ್ಎಸ್ ಪಕ್ಷದಿಂದ ನಿಂಗಪ್ಪ ಸ. ನಾಗಪ್ಪ ಅವರು ಒಂದು ನಾಮಪತ್ರ ಸಲ್ಲಿಸಿದ್ದು, 36-ಸೂರಪುರ, 37-ಶಹಾಪುರ ಹಾಗೂ 38- ಯಾದಗಿರಿ ಮತ ಕ್ಷೇತ್ರದಿಂದ ಯಾವುದೇ ನಾಮಪತ್ರಗಳು ಇಂದು ಸ್ವೀಕೃತವಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಗೋಕಾಕ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ರಮೇಶ ಜಾರಕಿಹೊಳಿ