ಯಾದಗಿರಿ: ಜಿಲ್ಲೆಗೆ ಸಾವಿರಾರು ವಲಸೆ ಕಾರ್ಮಿಕರು ವಾಪಸ್ ಆಗುತ್ತಿದ್ದು, ಇವರನ್ನೆಲ್ಲಾ ಜಿಲ್ಲಾಡಳಿತ ನಿಗದಿತ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸುವ ವ್ಯವಸ್ಥೆ ಮಾಡಿದೆ. ಆದ್ರೆ, ಕ್ವಾರಂಟೈನ್ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆವಿಲ್ಲದೆ ಕಾರಣ ಕ್ವಾರಂಟೈನ್ನಲ್ಲಿದ್ದ ಕಾರ್ಮಿಕರು ಪರದಾಡುವಂತಾಗಿದೆ.
ಹಸಿರು ವಲಯದಿಂದ ಬಂದ ಕಾರ್ಮಿಕರಿಗೆ ಮನೆಯಲ್ಲಿಯೇ ಹೋಂ ಕ್ವಾರಂಟೈನ್ನಲ್ಲಿರಲು ಜಿಲ್ಲಾಡಳಿತ ಸೂಚಿಸಿದ್ದು, ಇನ್ನು ರೆಡ್ ಝೋನ್ ಆದ ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯಗಳಿಂದ ಆಗಮಿಸುತ್ತಿರುವ ಕಾರ್ಮಿಕರಿಗಾಗಿ ಜಿಲ್ಲಾದ್ಯಂತ 32 ನಿಗದಿತ ಕ್ವಾರಂಟೈನ್ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿ ಅವರಿಗೆ ಇರಲು ವ್ಯವಸ್ಥೆ ಮಾಡಲಾಗಿದೆ. ಇನ್ನು ವಾಪಸ್ ಆದ ಕಾರ್ಮಿಕರಿಗೆ ಜ್ವರ ತಪಾಸಣೆ ಬಳಿಕ ನಿಗದಿತ ಕ್ವಾರಂಟೈನ್ಗಳಲ್ಲಿಡುವ ವ್ಯವಸ್ಥೆ ಮಾಡಲಾಗಿದೆ. ಆದ್ರೆ, ಆ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಮಾಡದ ಕಾರಣ ಅಲ್ಲಿಯ ಕಾರ್ಮಿಕರು ಅನ್ನ ನೀರಿಗಾಗಿ ಪರದಾಡುಂತಾಗಿದೆ.
ಇನ್ನು ಕಾರ್ಮಿಕರು 14 ದಿವಸ ಕಡ್ಡಾಯವಾಗಿ ಕ್ವಾರಂಟೈನ್ನಲ್ಲಿರಲು ಜಿಲ್ಲಾಡಳಿತ ಆದೇಶ ಕೂಡ ನೀಡಿದೆ. ಆದರೆ ಅಲ್ಲಿರುವ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ವಿಫಲವಾಗಿದೆ ಎಂಬುವ ಆರೋಪ ಕೇಳಿ ಬರುತ್ತಿದೆ. ನಗರದ ಹೊರ ಭಾಗದಲ್ಲಿರುವ ಆದರ್ಶ ವಿದ್ಯಾಲಯದಲ್ಲಿನ ಕ್ವಾರಂಟೈನ್ನಲ್ಲಿ ಮುಂಬಯಿನಿಂದ ಬಂದ 200 ಕ್ಕೂ ಹೆಚ್ಚು ಕಾರ್ಮಿಕರು ಇದ್ದು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕನಿಷ್ಠ ಸೌಲಭ್ಯಗಳಾದ ಕುಡಿಯುವ ನೀರು ಮತ್ತು ಊಟದ ವ್ಯವಸ್ಥೆ ಕೂಡ ಇಲ್ಲಿ ದೊರಕುತ್ತಿಲ್ಲ ಎಂದು ವಲಸೆ ಕಾರ್ಮಿಕರು ಆರೋಪಿಸುತ್ತಿದ್ದಾರೆ. ಇನ್ನು ರಾತ್ರಿಯಾದರೆ ಮಲಗುವುದಕ್ಕೆ ಸರಿಯಾದ ವ್ಯವಸ್ಥೆಯೂ ಇಲ್ಲದೆ, ಬಾಣಂತಿಯರು, ಹಸು ಕಂದಮ್ಮಗಳು ಕೂಡ ನರಕಯಾತನೆ ಅನುಭವಿಸುವಂತಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಇನ್ನು ನಿಗದಿತ ಕ್ವಾರಂಟೈನ್ನಲ್ಲಿ ಇರಲು ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡಿ ಇಲ್ಲವಾದರೆ ನಮ್ಮೂರಿಗೆ ನಮ್ಮನ್ನು ಕಳುಹಿಸಿ ಕೊಡಿ ಎಂದು ಆದರ್ಶ ವಿದ್ಯಾಲಯದ ಕ್ವಾರಂಟೈನ್ನಲ್ಲಿದ್ದ ಕಾರ್ಮಿಕರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.