ಗುರುಮಠಕಲ್ (ಯಾದಗಿರಿ): ಕೊರೊನಾ ನಿಯಂತ್ರಣಕ್ಕಾಗಿ ಪ್ರತಿ ಭಾನುವಾರದಂದು ಸರ್ಕಾರ ಲಾಕ್ಡೌನ್ ಜಾರಿ ಮಾಡಿದೆ. ಆದರೆ ಇದೇ ಸಮಯವನ್ನು ಬಳಸಿಕೊಂಡಿರುವ ಇಲ್ಲಿನ ಆಟೋ ಚಾಲಕರು ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರಿನಿಂದ ನಗರಕ್ಕೆ ಆಗಮಿಸಿದ ವೃದ್ದರು, ಮಹಿಳೆಯರು, ಮಕ್ಕಳು ತಮ್ಮ ಊರಿಗೆ ತೆರಳಲು ಬಸ್ ಸೌಕರ್ಯ ಇಲ್ಲದ ಹಿನ್ನೆಲೆಯಲ್ಲಿ ಪರದಾಡುವಂತಾಗಿದೆ. ಆದರೆ ಇದೇ ಸಂದರ್ಭವನ್ನು ಬಂಡವಾಳ ಮಾಡಿಕೊಂಡ ಆಟೋ ಚಾಲಕರು ಜನರಿಂದ ಸುಮಾರು 200 ರಿಂದ 300 ರಷ್ಟು ಹೆಚ್ಚು ಹಣ ಸುಲಿಗೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇಷ್ಟೇ ಅಲ್ಲ, ನಗರದೊಳಗೆ 2 ಕಿ.ಮೀ ಪ್ರಯಾಣ ಮಾಡಬೇಕಾದರೆ 150 ರೂ ಹಣ ಪೀಕುತ್ತಿದ್ದಾರೆ ಎಂದು ಜನರು ಹೇಳುತ್ತಿದ್ದು ಆಟೋ ಚಾಲಕರ ವಸೂಲಿ ದಂಧೆಗೆ ಜನ ಕಂಗಾಲಾಗಿದ್ದಾರೆ.