ಯಾದಗಿರಿ: ಚುನಾವಣೆ ನಿಯಮಗಳ ಪ್ರಕಾರ ಅರ್ಹತೆ ಪಡೆದ ಜಿಲ್ಲೆ ಮತ್ತು ತಾಲೂಕುಗಳಿಗೆ ವರ್ಷಾಂತ್ಯಕ್ಕೆ ಚುನಾವಣೆ ನಡೆಸಲಾಗುವುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಹೆಚ್.ರೇಣುಕಾ ಪ್ರಸನ್ನ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಈಗಾಗಲೇ 12 ಜಿಲ್ಲೆಗಳು ಮತ್ತು 106 ತಾಲೂಕು ಘಟಕಗಳಿಗೆ ಚುನಾವಣೆ ನಡೆದಿದೆ. ಬಾಕಿ ಉಳಿದ ಜಿಲ್ಲೆ ಮತ್ತು ತಾಲೂಕುಗಳಿಗೆ ಚುನಾವಣೆ ನಿಯಮಗಳ ಪ್ರಕಾರ ಡಿಸೆಂಬರ್ 27ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಹಾಸಭಾ ಸದಸ್ಯರಾಗಲು ನವೆಂಬರ್ 10 ಕೊನೆಯ ದಿನಾಂಕವಾಗಿದೆ ಹಾಗೂ ಅಂತಿಮ ಮತದಾರರ ಪಟ್ಟಿಯನ್ನು ನ. 30ಕ್ಕೆ ಪ್ರಕಟಿಸಲಾಗುವುದು ಎಂದರು.
ನಿಯಮಗಳ ಪ್ರಕಾರ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಯಬೇಕಾದರೆ ಕನಿಷ್ಠ 1,000 ಸದಸ್ಯರಿರಬೇಕು. ತಾಲೂಕು ಘಟಕಗಳಿಗೆ ಚುನಾವಣೆ ನಡೆಯಬೇಕಾದರೆ ಎಲ್ಲಾ ವರ್ಗಗಳ ಕನಿಷ್ಠ 300 ಸದಸ್ಯರು ಇರಬೇಕು. ಯಾದಗಿರಿ ಜಿಲ್ಲಾ ಘಟಕದಲ್ಲಿ 569 ಮತದಾರರ ಸದಸ್ಯರಿದ್ದು, ಇನ್ನುಳಿದ 431 ಸದಸ್ಯರುಗಳು ನೋಂದಣಿಯಾದರೆ ಜಿಲ್ಲಾ ಘಟಕವು ಚುನಾವಣೆಗೆ ಅರ್ಹತೆ ಪಡೆಯಲಿದೆ. ಅದೇ ರೀತಿ ಸುರಪುರ ತಾಲೂಕಿನಲ್ಲಿ ಕೇವಲ 10 ಸದಸ್ಯರಿದ್ದು, ಕನಿಷ್ಠ 290 ಸದಸ್ಯರಿದ್ದರೆ ಚುನಾವಣೆ ನಡೆಸಲು ಬರುತ್ತದೆ. ಅವಶ್ಯಕ ಸದಸ್ಯರುಗಳು ನೋಂದಣಿಯಾದರೆ ಯಾದಗಿರಿ ಜಿಲ್ಲೆ ಹಾಗೂ ಸುರಪುರ ತಾಲೂಕು ಘಟಕಕ್ಕೆ ಮೇಲಿನ ಚುನಾವಣಾ ವೇಳಾಪಟ್ಟಿಯಂತೆ ಚುನಾವಣೆ ನಡೆಯಲಿದೆ ಎಂದರು.
ಚುನಾವಣಾ ವೇಳಾಪಟ್ಟಿ ಪ್ರಕಾರ ನವೆಂಬರ್ 10ರ ವರೆಗೆ ಸದಸ್ಯರಾಗಲು ಅವಕಾಶವಿದ್ದು, ಈಗ ಸದಸ್ಯರಾಗುವವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತದಾನದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಜಿಲ್ಲಾ ಮತ್ತು ತಾಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರುಗಳು ಈ ವಿಷಯವನ್ನು ಇನ್ನು ಸದಸ್ಯರಾಗದಿರುವ ಸಮಾಜ ಬಾಂಧವರಿಗೆ ಸದಸ್ಯರಾಗುವಂತೆ ತಿಳಿಸಬೇಕು ಎಂದರು.