ಯಾದಗಿರಿ :ತಾಲೂಕಿನ ಕೌಳೂರ ಗ್ರಾಮದಲ್ಲಿ ಕೆಲವು ದಿನದ ಹಿಂದೆ ಭೀಮಾ ನದಿಯ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ಸಾಬರೆಡ್ಡಿ ಎಂಬಾತನ ಶವ ಪತ್ತೆಯಾಗಿದ್ದು ಕುಟಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಈತ ಜಮೀನಿನಲ್ಲಿ ಪಂಪ್ಸೆಟ್ ಕೆಲಸ ಮಾಡುತ್ತಿದ್ದಾಗ ಭೀಮಾ ನದಿ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಹಾಗೂ ಜಿಲ್ಲಾ ಅಗ್ನಿ ಶಾಮಕ ದಳದಿಂದ ಸಾಬರೆಡ್ಡಿ ಶವಕ್ಕಾಗಿ ಕಾರ್ಯಾಚರಣೆ ನಡೆಸಿದ್ದರು.
ಕೃಷ್ಣ ನದಿ ಪ್ರವಾಹಕ್ಕೆ ಸೇತುವೆಯೊಂದು ಕೊಚ್ಚಿ ಹೋದ ಘಟನೆ ಜಿಲ್ಲೆಯ ಸುರಪೂರ ತಾಲೂಕಿನ ನೀಲಕಂಠರಾಯನ ನಡುಗಡ್ಡೆ ಗ್ರಾಮದ ಸೇತುವೆ ಕೊಚ್ಚಿ ಹೋಗಿದೆ. ಜಿಲ್ಲೆಯ ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದಿಂದ ಕೃಷ್ಣ ನದಿಗೆ 5,62,120 ಕ್ಯೂಸೆಕ್ ನೀರು ಹರಿಸಲಾಗಿದ್ದರಿಂದ ಈ ಅವಂತಾರ ಸೃಷ್ಟಿಯಾಗಿದೆ. ಕೆಲ ವರ್ಷಗಳ ಹಿಂದೆ ಹೈಡ್ರೋ ಪವರ್ ಕಂಪನಿ ಈ ಸೇತುವೆಯನ್ನು ನಿರ್ಮಿಸಿತ್ತು. ಪ್ರಸ್ತುತ ಸೇತುವೆ ಐವತ್ತರಿಂದ ಅರವತ್ತು ಮೀಟರ್ವರೆಗೆ ಕೊಚ್ಚಿ ಹೋಗಿದೆ.
ನೂತನವಾಗಿ ಜಿಲ್ಲಾಡಳಿತ ವತಿಯಿಂದ ನೀಲಕಂಠರಾಯನ ಗಡ್ಡಿ ಜನರ ಸಂಚಾರಕ್ಕಾಗಿ ಸೇತುವೆ ಕೂಡ ನಿರ್ಮಿಸಲಾಗಿತ್ತು. ಅದೂ ಕೂಡ ಸಂಪೂರ್ಣವಾಗಿ ಜಲಾವೃತ್ತವಾಗಿದ್ದು, ಕೊಚ್ಚಿ ಹೋಗುವ ಭೀತಿ ಎದುರಾಗಿದೆ.