ಯಾದಗಿರಿ: ಕೋವಿಡ್ ವ್ಯಾಕ್ಸಿನೇಷನ್ಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ಎಡವಟ್ಟು ಮುಂದುವರಿದಿದೆ. ಇದಕ್ಕೆ ಸಾಕ್ಷಿ ಎಂಬಂತ ಘಟನೆಯೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸತ್ತವರಿಗೂ ಕೊರೊನಾ ಲಸಿಕೆ ನೀಡಿಕೆ ಹಾಗೂ ಕೋವಿಡ್ ಟೆಸ್ಟ್ ಮಾಡಿಸಿರುವ ಸಂದೇಶ ರವಾನಿಸಿ ಯಾದಗಿರಿ ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಎಡವಟ್ಟು ಮಾಡಿಕೊಂಡಿದೆ.
ಹೌದು, ಕೋವಿಡ್ ಲಸಿಕೆಯ 2 ಡೋಸ್ ಬಳಿಕ ಅರ್ಹರಿಗೆ ಬೂಸ್ಟರ್ ಡೋಸ್ ಹಾಕಿಸಿಕೊಳ್ಳುವಂತೆ ಸರ್ಕಾರದ ಆದೇಶ ಹೊರಬಿದ್ದ ಬೆನ್ನಲ್ಲೇ ಸತ್ತವರಿಗೂ ಬೂಸ್ಟರ್ ಡೋಸ್ ನೀಡಿರುವ ಬಗ್ಗೆ ಸಂದೇಶಗಳು ಮೊಬೈಲ್‌ಗಳಿಗೆ ಬರುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಕಳೆದ ವರ್ಷವೂ ಬಂದಿತ್ತು ಸಂದೇಶ.. 2021ರ ಮೇ 23ರಂದು ಕೋವಿಡ್‌ನಿಂದಾಗಿ ಮೃತಪಟ್ಟ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯ ಪತ್ರಕರ್ತ ಮುರಾರಿರಾವ್ ಶಿಂಧೆ ಎಂಬವರಿಗೆ ಮೂರನೇ ಡೋಸ್ ಲಸಿಕೆ ನೀಡಿರುವುದಾಗಿ ಸಂದೇಶ ಬಂದಿದೆ. ಕಳೆದ ವರ್ಷ ಮುರಾರಿರಾವ್ ಶಿಂಧೆ ಅವರು ಮೃತಪಟ್ಟ ಮೂರು ತಿಂಗಳಿಗೇ ಅವರಿಗೆ ಎರಡನೇ ಡೋಸ್ ಹಾಕಿರುವ ಬಗ್ಗೆಯೂ ಸಂದೇಶ ಬಂದಿತ್ತು. ಆಗ ಕುಟುಂಬಸ್ಥರು ಅಚ್ಚರಿಗೊಂಡು ಇಲಾಖೆಯ ಗಮನಕ್ಕೆ ತಂದಿದ್ದರು. ಈ ರೀತಿಯ ನಕಲಿ ದಾಖಲೀಕರಣದ ಬಗ್ಗೆ ಅನುಮಾನಗಳು ಮೂಡಿವೆ.
ಇದೀಗ ಮತ್ತೆ ಅವರ ಮೊಬೈಲ್ ಸಂಖ್ಯೆಗೆ ಬೂಸ್ಟರ್ ಡೋಸ್ ಸಕ್ಸಸ್‌ಫುಲ್ ಎಂಬ ಸಂದೇಶ ಬಂದಿದೆ. ‘ನೀವು ಬೂಸ್ಟರ್ ಡೋಸ್(ಪ್ರಿಕಾಷನ್ ಡೋಸ್)ಗೆ ಅರ್ಹರಿದ್ದೀರೆಂದು’ ಇದೇ ಮೇ 4ರಂದು ಮೊಬೈಲ್ಗೆ ಸಂದೇಶ ಬಂದಿತ್ತು. ಬಳಿಕ ಮೇ 9ರಂದು ನಿಮಗೆ ಪ್ರಿಕಾಷನ್ ಡೋಸ್ ಯಶಸ್ವಿಯಾಗಿ ಹಾಕಲಾಗಿದೆ ಎಂಬ ಮೆಸೇಜ್ ಬಂದಿದೆಯಂತೆ. ಈಗ ನಾಲ್ಕನೇ ಅಲೆಯ ಭೀತಿ ಸಂದರ್ಭದಲ್ಲಿ ಬೂಸ್ಟರ್ ಡೋಸ್‌ನಲ್ಲೂ ಇಂತಹ ಪ್ರಮಾದಗಳು ಸಾರ್ವಜನಿಕರ ವಲಯದಲ್ಲಿ ಸಾಕಷ್ಟು ಸಂಶಯಗಳಿಗೆ ಕಾರಣವಾಗಿದೆ.
ಮಗ ವಿಶಾಲ್ ಶಿಂಧೆ ಹೇಳಿದ್ದು ಹೀಗೆ.. ನಮ್ಮ ತಂದೆ ತೀರಿಕೊಂಡು ವರ್ಷ ಸಮೀಪಿಸುತ್ತಿದೆ. ಈಗ ಮೂರನೇ ಬೂಸ್ಟರ್ ಡೋಸ್ ಬಗ್ಗೆ ಮೆಸೇಜ್ ಬಂದಿದೆ. ಇಂತಹ ಪ್ರಮಾದಗಳು ಲಸಿಕಾಕರಣದ ಉದ್ದೇಶವನ್ನೇ ವಿಫಲಗೊಳಿಸುವಂತಿವೆ ಅಂತ ಪತ್ರಕರ್ತ ದೋರನಹಳ್ಳಿ ಮುರಾರಿರಾವ್ ಪುತ್ರ ವಿಶಾಲ್ ಶಿಂಧೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ..ತಂದೆ ಹಣ ನೀಡಿಲ್ಲವೆಂದು ಮರ್ಮಾಂಗಕ್ಕೆ ತ್ರಿಶೂಲ ಚುಚ್ಚಿಕೊಂಡ ಮಗ.. ಧಾರವಾಡದಲ್ಲಿ ವಿಚಿತ್ರ ಘಟನೆ