ಯಾದಗಿರಿ: ಕಳೆದ ಒಂದು ತಿಂಗಳ ಹಿಂದಷ್ಟೇ ಯಾದಗಿರಿ ಸಂಪೂರ್ಣ ಹಸಿರು ವಲಯವಾಗಿತ್ತು. ಆದ್ರೆ ಈಗ ಈ ಜಿಲ್ಲೆ ಕೊರೊನಾ ಹೆಡ್ ಕ್ವಾರ್ಟರ್ ಆಗಿ ಪರಿವರ್ತನೆಯಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಕಾಣಿಸಿಕೊಂಡ ಮಹಾರಾಷ್ಟ್ರದ ನಂಜು ಈಗ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ವ್ಯಾಪಿಸಿದ್ದು ನಗರದ ಜನತೆಯಲ್ಲಿ ಆತಂಕ ಸೃಷ್ಟಿ ಮಾಡಿದೆ.
ಲಾಕ್ ಡೌನ್ ಸಡಲಿಕೆ ನಂತರ ಇಲ್ಲಿಯವರೆಗೆ ಮಹಾರಾಷ್ಟ್ರದಿಂದ 15 ಸಾವಿರಕ್ಕೂ ಹೆಚ್ಚು ವಲಸಿಗರು ಜಿಲ್ಲೆಗೆ ವಾಪಸ್ ಆಗಿದ್ದರು. ಪ್ರತಿನಿತ್ಯ ವಾಪಸ್ ಆಗುತ್ತಿದ್ದ ವಲಸಿಗರನ್ನ ಆರೋಗ್ಯ ತಪಾಸಣೆ ಬಳಿಕ ಜಿಲ್ಲಾಡಳಿತ ಅವರನ್ನೆಲ್ಲ ಜಿಲ್ಲೆಯ ನಿಗದಿತ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗುತ್ತಿತ್ತು. ಈಗ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ 800 ಗಡಿ ದಾಟಿದ್ದು, ಇದರಲ್ಲಿ ಅತಿ ಹೆಚ್ಚು ಮಹಾರಾಷ್ಟ್ರದ ಲಿಂಕ್ ಹೊಂದಿವೆ.
ಇನ್ನು ಈ ಎಲ್ಲಾ ಪ್ರಕರಣಗಳು ಗ್ರಾಮಾಂತರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದವು. ಆದ್ರೆ ಈಗ ಮಹರಾಷ್ಟ್ರದ ಲಿಂಕ್ ಯಾದಗಿರಿ ಜಿಲ್ಲಾ ಕೇಂದ್ರಕ್ಕೂ ವ್ಯಾಪಿಸಿದ್ದು ನಗರದಲ್ಲಿ ವಾಸಿಸುವ ಜನರಲ್ಲೀಗ ಆತಂಕ ಶುರುವಾಗಿದೆ.
ಮಹಾರಾಷ್ಟ್ರದಿಂದ ಇತ್ತೀಚೆಗೆ ಆಗಮಿಸಿದ 20 ಜನ ಯಾದಗಿರಿ ನಿವಾಸಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ವರದಿ ಬರುವ ಮುಂಚೆಯೇ ಜಿಲ್ಲಾಡಳಿತ ಇವರನ್ನೆಲ್ಲ ಹೋಂ ಕ್ವಾರಂಟೈನ್ಗೆ ಕಳಿಸಿತ್ತು. ಮನೆಯಲ್ಲಿರಬೇಕಾದ ಇವರೆಲ್ಲ ನಗರದ ತುಂಬೆಲ್ಲಾ ಸುತ್ತಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೀಗ ಜಿಲ್ಲಾಡಳಿತ ಆದೇಶದ ಮೇರೆಗೆ ಯಾದಗಿರಿ ನಗರಸಭೆ ವ್ಯಾಪ್ತಿಗೆ ಬರುವ ವಾರ್ಡ್ ನಂ 09, 21, ಹಾಗೂ 25ರ ವ್ಯಾಪ್ತಿಗೆ ಬರುವ ನಾಲ್ಕು ಬಡಾವಣೆಗಳನ್ನ ಸೀಲ್ ಡೌನ್ ಮಾಡಲಾಗಿದೆ. ಆದ್ರೆ ಸೀಲ್ಡೌನ್ ಮಾಡುವ ಮುಂಚೆಯೇ ಸೋಂಕಿತರು ಅಡ್ಡಾದಿಡ್ಡಿಯಾಗಿ ತಿರುಗಾಡಿದ್ದರಿಂದ, ಇಷ್ಟು ದಿನ ಸುರಕ್ಷಿತವಾಗಿದ್ದ ಯಾದಗಿರಿ ಜಿಲ್ಲಾ ಕೇಂದ್ರದಲ್ಲೀಗ ಕೊರೊನಾ ಆತಂಕ ಸೃಷ್ಟಿಯಾಗಿದೆ.