ಯಾದಗಿರಿ: ದೆಹಲಿಯ ಏಮ್ಸ್ ನಿರ್ದೇಶಕರಾಗಿ ಯಾದಗಿರಿ ಮೂಲದ ಡಾ.ಎಂ.ಶ್ರೀನಿವಾಸ್ ನೇಮಕವಾಗಿದ್ದಾರೆ. ಶ್ರೀನಿವಾಸ್ ಅವರು ಮುಂದಿನ ಐದು ವರ್ಷದ ಅವಧಿಗೆ ಏಮ್ಸ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೇಮಕಾತಿ ಕಮಿಟಿಯ ಸೂಚನೆ ಮೇರೆಗೆ ಸಿಬ್ಬಂದಿ ಮತ್ತು ತರಬೇತಿ ವಿಭಾಗ ಆದೇಶ ಹೊರಡಿಸಿದೆ.
ದೆಹಲಿಯ ಏಮ್ಸ್ ನಿರ್ದೇಶಕ ಹುದ್ದೆಗೆ ಕನ್ನಡಿಗ ನೇಮಕ: ಯಾದಗಿರಿಯ ನಿವಾಸಿಯಾಗಿದ್ದ ದಿವಂಗತ ಆಶಪ್ಪ ಅವರ ಹಿರಿಯ ಪುತ್ರರಾಗಿರುವ ಡಾ. ಎಂ. ಶ್ರೀನಿವಾಸ್ ಅವರು ದೇಶದ ಪ್ರತಿಷ್ಠಿತ ಏಮ್ಸ್ ನಿರ್ದೇಶಕರಾಗಿ ನೇಮಕವಾಗಿರುವುದು ಯಾದಗಿರಿ ವೈದ್ಯ ಸಮೂಹ ಮತ್ತು ಜನರಿಗೆ ಸಂತಸ ಹಾಗೂ ಹೆಮ್ಮೆ ಮೂಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕಮೀಟಿಯು ಸೆ.9 ರಂದು ಈ ಆದೇಶ ಹೊರಡಿಸಿದೆ. ಇದಕ್ಕೂ ಮುಂಚೆ ಇದ್ದ ಡಾ. ರಣದೀಪ್ ಗುಲೇರಿಯಾ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ, ಮುಂದಿನ 5 ವರ್ಷದವರೆಗೆ ಅಥವಾ 65 ವರ್ಷ ವಯೋಮಿತಿ ವರೆಗೆ ಇದನ್ನು ಮುಂದುವರೆಸಲಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಈ ಹಿಂದೆ ನಿರ್ದೇಶಕರಾಗಿದ್ದ ಡಾ. ರಣದೀಪ್ ಗುಲೇರಿಯಾ (Dr Randeep Guleria) ಅವರನ್ನು 2017 ಮಾರ್ಚ್ 28ರಂದು ಏಮ್ಸ್ ನಿರ್ದೇಶಕರಾಗಿ ಐದು ವರ್ಷಗಳ ಅವಧಿಗೆ ನೇಮಕ ಮಾಡಲಾಗಿತ್ತು. ಅಧಿಕಾರ ಅವಧಿ ಮುಗಿದ ನಂತರ ಎರಡು ಬಾರಿ ತಲಾ ಮೂರು ತಿಂಗಳಂತೆ ಅವಧಿ ವಿಸ್ತರಿಸಲಾಗಿತ್ತು. ಇವರ ಅಧಿಕಾರಿ ಶುಕ್ರವಾರ ಅಂತ್ಯವಾಗಲಿದ್ದು, ಡಾ.ಶ್ರೀನಿವಾಸ್ ಮುಂದಿನ ಐದು ವರ್ಷ ಕಾರ್ಯನಿರ್ವಹಿಸಲಿದ್ದಾರೆ.
2016ಕ್ಕೂ ಮುಂಚೆ ಏಮ್ಸ್ನಲ್ಲಿ ಕಾರ್ಯನಿರ್ವಹಿಸಿದ್ದರು: ಶ್ರೀನಿವಾಸ್ ಅವರ ತಂದೆ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸಿದ್ದರು. ಶ್ರೀನಿವಾಸ್ ಅವರ ಕಿರಿಯ ಸಹೋದರ ಡಾ. ನಾಗರಾಜ್ ಸಹ ಖ್ಯಾತ ದಂತ ವೈದ್ಯರು. ಡಾ.ಶ್ರೀನಿವಾಸ್ ಏಮ್ಸ್ ನಿರ್ದೇಶಕರ ಆಯ್ಕೆಗೂ ಮುಂಚೆ ಹೈದರಾಬಾದ್‌ನ ಈಎಸ್‌ಐಸಿ ಆಸ್ಪತ್ರೆಯಲ್ಲಿ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 2016ಕ್ಕೂ ಮುಂಚೆ ದೆಹಲಿ ಏಮ್ಸ್ನಲ್ಲಿ ಕಾರ್ಯನಿರ್ವಹಿಸಿದ್ದರು. ಬಳಿಕ ಚಿಕ್ಕಮಕ್ಕಳ ಶಸ್ತ್ರಚಿಕಿತ್ಸಾ ವಿಶೇಷ ತಜ್ಞ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದರು.
ಯಾದಗಿರಿ ನಗರದಲ್ಲಿಯೇ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರು. ಚಿಕ್ಕನಿಂದಲೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಶ್ರೀನಿವಾಸ್ ಅವರು ಯಾದಗಿರಿ ನಗರದ ಎಂಪಿಎಸ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನ್ಯೂ ಕನ್ನಡ ಶಾಲೆಯಲ್ಲಿ ಪ್ರೌಢ ಶಿಕ್ಷಣ, ನಗರದ ಜೂನಿಯರ್ ಕಾಲೇಜಲ್ಲಿ ಪಿಯು ಶಿಕ್ಷಣ ಪಡೆದರು. ನಂತರ ಬಳ್ಳಾರಿಯಲ್ಲಿ ಎಂಬಿಬಿಎಸ್, ದಾವಣಗೆರೆ ಜೆಜೆಎಂ ವೈದ್ಯಕೀಯ ಕಾಲೇಜಲ್ಲಿ ಎಂಎಸ್ ಅಧ್ಯಯನ ಮಾಡಿದರು. ದೆಹಲಿಯ ಏಮ್ಸ್ ನಲ್ಲಿ ಎಂಸಿಎಚ್ ವ್ಯಾಸಂಗ ಮಾಡಿದ್ದಾರೆ ಶ್ರೀನಿವಾಸ್.
ಸರಳ ಮತ್ತು ಮಧ್ಯಮ ಕುಟುಂಬದಲ್ಲಿ ಜನಿಸಿರುವ ಶ್ರೀನಿವಾಸ್ ಅವರು ಉನ್ನತ ಹುದ್ದೆಗೇರಿರುವುದು ಯಾದಗಿರಿ ಮತ್ತು ರಾಜ್ಯದ ಜನರಲ್ಲಿ ಸಂತಸ ಮೂಡಿಸಿದೆ.
(ಇದನ್ನೂ ಓದಿ: ಯಾದಗಿರಿಯಲ್ಲಿ 2.5 ಎಕರೆ ಭತ್ತಕ್ಕೆ 2.5 ನಿಮಿಷದಲ್ಲಿ ಔಷಧ ಸಿಂಪಡಿಸಿದ ಡ್ರೋನ್...)