ಯಾದಗಿರಿ: ಗಡಿಯಲ್ಲಿ ನಿಂತು ದೇಶ ಕಾಯೋ ಸೈನಿಕ ತನ್ನ ಮನೆ ಚಿಂತೆ ಮಾಡದೆ ದೇಶಸೇವೆಯಲ್ಲಿಯೇ ಸುಖ ಕಾಣುತ್ತಾನೆ. ಅಂತಹ ಸೈನಿಕನ ಕುಟುಂಬವೀಗ ಜೀವನ ಸಾಗಿಸಲು ಅಂಗೈಯಗಲ ಜಾಗವಿಲ್ಲದೆ ಪರದಾಡುತ್ತಿದೆ.
ಜಿಲ್ಲೆಯ ಲಾಡಿಸ್ ಗಲ್ಲಿ ನಿವಾಸಿಗಳಾದ ಮೃತ ಸೈನಿಕನ ಕುಟುಂಬಸ್ಥರೀಗ ಇರುವುದೊಂದು ಮನೆ ಕಳೆದುಕೊಳ್ಳುವ ಸ್ಥಿತಿಗೆ ಬಂದು ನಿಂತಿದ್ದಾರೆ. 1947ರ ಸುಮಾರಲ್ಲಿ ಗಡಿಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿದ್ದ ಅಮೀರ್ ಖಾನ್ ಎಂಬ ಸೈನಿಕನ ಕುಟುಂಬಸ್ಥರು ನೆಲೆಯಿಲ್ಲದೆ ಗೋಳಾಡುತ್ತಿದ್ದಾರೆ. ಅಮೀರ್ ಖಾನ್ ವಯೋಸಹಜ ಖಾಯಿಲೆಗೆ ಒಳಗಾಗಿ ಮೃತಪಟ್ಟ ಬಳಿಕ ರಾಯಚೂರಿನಿಂದ ಕುಟುಂಬಸ್ಥರು ಯಾದಗಿರಿಗೆ ಬಂದು ನೆಲೆಸಿದ್ದರು.
ಅಂದಿನ ಯಾದಗಿರಿ ಜಿಲ್ಲಾಧಿಕಾರಿಗೆ ಮನೆ ನಿರ್ಮಿಸಲು ಜಾಗಕ್ಕಾಗಿ ಮನವಿ ಮಾಡಿದ್ದರು. ಈ ಹಿನ್ನೆಲೆ ಮೌಖಿಕವಾಗಿ ಸರ್ವೆ ನಂಬರ್ 248ರಲ್ಲಿ ಖಾಲಿ ಜಾಗ ನೀಡಿದ್ದರು. ಕಳೆದ 11 ವರ್ಷದಿಂದ ಯೋಧನ ಕುಟುಂಬದವರು ಇದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಇದೀಗ ನಗರಸಭೆಯೂ ಈ ಜಾಗದಲ್ಲಿ ಪಾರ್ಕ್ ನಿರ್ಮಿಸಬೇಕಿದೆ ಎಂದು ಮನೆಯ ಒಂದು ಭಾಗವನ್ನು ಏಕಾಏಕಿ ನೆಲಕ್ಕುರುಳಿಸಿದೆ.
ಇದರಿಂದ ನೊಂದಿರುವ ಸೈನಿಕನ ಪುತ್ರ ಶಮ್ಮೀರ್ ಖಾನ್, ಮೊಮ್ಮಗಳು ತಬನಮ್ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಒಂದಿಷ್ಟು ದಿನವಾದರೂ ಕಾಲಾವಕಾಶ ನೀಡಿ. ಬೇರೆಡೆ ಮನೆ ನಿರ್ಮಿಸುವ ಕುರಿತು ಸೂಕ್ತ ನ್ಯಾಯ ಒದಗಿಸಿ ಎಂದು ಅಂಗಲಾಚುತ್ತಿದ್ದಾರೆ. ಇನ್ನೂ ಈ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ನಗರ ಸಭೆ ಕಮಿಷನರ್ ಬಕ್ಕಪ್ಪ, ಅದು ಸರ್ಕಾರಿ ಜಾಗ, ಅವರಿಗೆ ಜಾಗ ಮೂಂಜೂರು ಮಾಡಿರುವುದಕ್ಕೆ ಯಾವುದೇ ದಾಖಲೆ ಇಲ್ಲ. ಹೀಗಾಗಿ ನಮ್ಮ ಅಧಿಕಾರಿಗಳು, ಖಾಲಿ ಮಾಡಿಸಲು ಮುಂದಾಗಿದ್ದಾರೆ ಎಂದಿದ್ದಾರೆ.