ಯಾದಗಿರಿ: ಭೀಮಾ ನದಿ ಹಿನ್ನೀರಿನಲ್ಲಿ ಕೊಚ್ಟಿ ಹೋಗುತ್ತಿದ್ದ 15 ದಿನದ ಹಸುಗೂಸನ್ನು ಸ್ಥಳೀಯರು ರಕ್ಷಣೆ ಮಾಡಿರುವಂತಹ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ರೋಜಾ ಗ್ರಾಮದಲ್ಲಿ ನಡೆದಿದೆ.
ಮಹಾ ಮಳೆಯಿಂದ ಜಿಲ್ಲೆಯ ಭೀಮಾ ನದಿ ಉಕ್ಕಿ ಹರಿಯುತ್ತಿದ್ದು, ನದಿಯ ಹಿನ್ನೀರು ರೋಜಾ ಗ್ರಾಮದಲ್ಲಿ ನುಗ್ಗಿ ಇಡೀ ಗ್ರಾಮವೇ ಜಲಾವೃತಗೊಂಡಿದ್ದು, ಗ್ರಾಮದ ಸಂಪರ್ಕ ಕಲ್ಪಿಸುವ ರಸ್ತೆಗಳು ಕೂಡ ಮುಳುಗಿ ಹೋಗಿವೆ.
ಇನ್ನು ಗ್ರಾಮದ ಜನರನ್ನು ತೆಪ್ಪದ ಮೂಲಕ ಬೇರೆ ಕಡೆ ಸ್ಥಾಳಾಂತರಿಸುತ್ತಿದ್ದ ವೇಳೆ ತೆಪ್ಪ ಅಲುಗಾಡಿ 15 ದಿನದ ಹಸುಗುಸು ನೀರಿನಲ್ಲಿ ಬಿದ್ದ ಪರಿಣಾಮ ಸ್ಥಳೀಯರು ತಕ್ಷಣ ನೀರಿಗಿಳಿದು ಮಗುವನ್ನ ರಕ್ಷಣೆ ಮಾಡಿ ಪೋಷಕರಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ಗ್ರಾಮದ ತವಕಲ್ ಹಾಗೂ ರಜೀಯಾ ಎಂಬ ದಂಪತಿಗೆ ಸೇರಿದ ಗಂಡು ಮಗು ಸ್ಥಳೀಯರ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿದೆ. ಭೀಮಾ ನದಿಯ ಹಿನ್ನೀರಿನಿಂದ ನಡು ಗಡ್ಡೆಯಾದ ರೋಜಾ ಗ್ರಾಮದ ಜನರನ್ನ ಸ್ಥಳೀಯ ಮೀನುಗಾರರ ಸಹಾಯದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.