ಗುರುಮಠಕಲ್: ಪಟ್ಟಣದ ಎಸ್ಎಲ್ಟಿ ಪಬ್ಲಿಕ್ ಶಾಲೆಯ 6 ವರ್ಷದ ಬಾಲಕ ಲಕ್ಷ್ಮಿ ತಿಮ್ಮಪ್ಪ ರಾಠೋಡ್ 2 ನಿಮಿಷ ಐದು ಸೆಕೆಂಡ್ಗಳಲ್ಲಿ 197 ದೇಶಗಳ ಧ್ವಜವನ್ನು ಗುರುತಿಸುವ ಮೂಲಕ ದೇಶಗಳ ಹೆಸರುಗಳುನ್ನು ಹೇಳಿ ಎಲ್ಲರ ಗಮನ ಸೆಳೆದಿದ್ದಾನೆ.
ಈ ಬಾಲಕ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಲಾಕ್ಡೌನ್ ಸಂದರ್ಭವನ್ನು ಸದುಪಯೋಗಪಡಿಸಿಕೊಂಡ ವಿದ್ಯಾರ್ಥಿ ಇಂತಹದೊಂದು ಸಾಧನೆ ಮಾಡಿದ್ದಾನೆ. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಮಕ್ಕಳಲ್ಲಿ ಅಡಗಿದ್ದ ಪ್ರತಿಭೆ ಬೆಳಕಿಗೆ ಬರಲು ಸೂಕ್ತ ಮಾರ್ಗದರ್ಶನ ನೀಡುವುದು ಅಗತ್ಯ. ಒಂದು ವೇಳೆ ಅಂತಹ ವೇದಿಕೆ ಸಿಕ್ಕಲ್ಲಿ ಮಕ್ಕಳ ಪ್ರತಿಭೆ ಹೊರ ಬರುವುದರಲ್ಲಿ ಸಂದೇಹವೇ ಇಲ್ಲ. ಲಾಕ್ಡೌನ್ ಸಂದರ್ಭದಲ್ಲಿ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಬಾಲಕನ ವಿಶೇಷ ಆಸಕ್ತಿಯನ್ನು ಗಮನಿಸಿದ ಶಿಕ್ಷಕಿ ವಿಜಯಲಕ್ಷ್ಮೀ, ಬಾಲಕನ ಅಭ್ಯಾಸಕ್ಕೆ ಬೇಕಾದ ಪೂರಕ ವ್ಯವಸ್ಥೆ ಮಾಡಿದ್ದಾರೆ.
ಪರಿಣಾಮ ಇಂದು ಬಾಲಕನಲ್ಲಿ ಅಡಗಿರುವ ಪ್ರತಿಭೆ ಅನಾವರಣಗೊಂಡಿದೆ. ಪ್ರತೀ ಪಾಲಕರು ಹಾಗೂ ಶಿಕ್ಷಕರು ಮಕ್ಕಳಿಗೆ ಇರುವ ಆಸಕ್ತಿಯನ್ನು ಗಮನಿಸಿ ಅವರ ಅಭ್ಯಾಸಕ್ಕೆ ಸೂಕ್ತ ವಾತಾವರಣ ಕಲ್ಪಿಸಿದರೆ ಅನೇಕ ಪ್ರತಿಭೆಗಳು ಹೊರ ಬರುವುದರಲ್ಲಿ ಸಂದೇಹವಿಲ್ಲ. ಈ ಬಗ್ಗೆ ಎಸ್ಎಲ್ಟಿ ಪಬ್ಲಿಕ್ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ನರೇಂದ್ರ ರಾಠೋಡ, ಶಿಕ್ಷಕರು ವಿದ್ಯಾರ್ಥಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.