ಯಾದಗಿರಿ: ತಾಲೂಕಿನ ಯರಗೋಳ ಗ್ರಾಮದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು, ಬಾಲ ಕಾರ್ಮಿಕ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಿ, ಶಾಲೆಬಿಟ್ಟ ಮಕ್ಕಳ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಪತ್ತೆಯಾದ 6 ರಿಂದ 14 ವರ್ಷದೊಳಗಿನ ಮಕ್ಕಳನ್ನು ಪತ್ತೆಹಚ್ಚಿ ಶಾಲೆಗೆ ದಾಖಲಿಸಿದ್ದಾರೆ.
ಸುಮಾರು 80ಕ್ಕೂ ಹೆಚ್ಚು ಜನರನ್ನು ಕರೆದುಕೊಂಡು ಹೋಗುತ್ತಿದ್ದ 1 ಟ್ರಾಕ್ಟರ್, 2 ಟಂಟಂ ವಾಹನಗಳನ್ನು ತಡೆಹಿಡಿದು ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳ ತಂಡ, ವಾಹನ ಚಾಲಕರ ಮತ್ತು ಮಕ್ಕಳ ಮಾಹಿತಿಯನ್ನು ಪಡೆದಿದೆ. ಅನಂತರ ವಾಹನಗಳನ್ನು ಜಪ್ತಿ ಮಾಡಿ, ದಂಡ ವಿಧಿಸುವುದರ ಜೊತೆಗೆ 1988ರ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ವಾಹನ ಚಾಲಕರನ್ನ ಬಂಧಿಸಿ ಚಾಲನೆ ಪರವಾನಿಗೆಯನ್ನು ರದ್ದುಪಡಿಸುವ ಕ್ರಮ ಕೈಗೊಂಡಿದೆ.
ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ಶಿವಶಂಕರ ಬಿ. ತಳವಾರ ಜಿಲ್ಲಾ ಬಾಲಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕರಾದ ರಘುವೀರ ಸಿಂಗ್ ಠಾಕೂರ್, ಶಿಕ್ಷಣ ಇಲಾಖೆ ಅಧಿಕಾರಿಗಳು ಆರ್.ಟಿ.ಓ ಮತ್ತು ಪೊಲೀಸ್ ಇಲಾಖೆಗಳು ಜಂಟಿಯಾಗಿ ಈ ದಾಳಿ ನಡೆಸಿದ್ದಾರೆ.