ಮುದ್ದೇಬಿಹಾಳ(ವಿಜಯಪುರ): ವಿಜಯಪುರ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಮುದ್ದೇಬಿಹಾಳ ತಾಲೂಕಿನ ಇಣಚಗಲ್ ಕ್ರಾಸ್ ಸಮೀಪದ ಹೊಲವೊಂದರಲ್ಲಿ ಕಿರು ಸೇತುವೆ ಕೆಳಗೆ ಅಪರಿಚಿತ ಯುವತಿಯೋರ್ವಳ ಕೊಲೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಪೊಲೀಸರು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ.
ಅಂದಾಜು 20-22 ವಯಸ್ಸಿನ ಯುವತಿಯ ಶವ ಪತ್ತೆಯಾಗಿದೆ. ವೇಲ್‌ನಿಂದ ಕುತ್ತಿಗೆಗೆ ಬಿಗಿದು ತಲೆಯನ್ನು ಜಜ್ಜಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಬಳಿಕ ಸೇತುವೆಯ ಕೊಳಾಯಿಯಲ್ಲಿಯೇ ಮೃತದೇಹವನ್ನು ಎಸೆದು ಪರಾರಿಯಾಗಿದ್ದಾರೆ. ಮೃತದೇಹ ನೋಡಿದ ದಾರಿಹೋಕರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.
ವಿಷಯ ತಿಳಿಯುತ್ತಿದ್ದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್‌ಅರಸಿದ್ಧಿ, ಡಿವೈಎಸ್ಪಿ ಅರುಣಕುಮಾರ ಕೋಳೂರ, ಸಿಪಿಐ ಆನಂದ ವಾಘಮೋಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ತಪಾಸಣೆ ನಡೆಸಿದ್ದಾರೆ.
ಯುವತಿ ಶವ ಮರಣೋತ್ತರ ಪರೀಕ್ಷೆಯನ್ನು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ನಡೆಸಲು ಪೊಲೀಸರು ನಿರ್ಧರಿಸಿದ್ದು, ಆಕೆಯ ಕೊಲೆಗೆ ಕಾರಣ ಏನು ಎಂಬುದು ತನಿಖೆಯ ನಂತರವಷ್ಟೇ ತಿಳಿದು ಬರಲಿದೆ. ಯುವತಿಯ ಗುರುತು ಪತ್ತೆ ಪೊಲೀಸರಿಗೆ ಸವಾಲಾಗಿದೆ. ಈ ಸಂಬಂಧ ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.