ಮುದ್ದೇಬಿಹಾಳ: 'ನಿಮಗೆ ಕೈ ಮುಗಿದು ಕೇಳ್ತೀವಿ. ಕೋವಿಡ್ ಕೇರ್ ಸೆಂಟರ್‌ಗೆ ನಮ್ಮನ್ನ ಕಳಸಬ್ಯಾಡ್ರಿ.. ಹೊಲದಾಗೋ, ಇಲ್ಲೋ ನಮ್ಮ ಮನಿಯಾಗೋ ಹೆಂಗೋ ಇರುತ್ತೇವೆ. ನಮ್ಮನ್ನು ಬಿಟ್ಟುಬಿಡ್ರಿ' ಎಂದು ತಾಲೂಕಿನ ಮುದೂರ ಗ್ರಾಮದ ಕೊರೊನಾ ಸೋಂಕಿತರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಒಬ್ಬರ ಸಂಪರ್ಕದಿಂದ ಹಲವರಿಗೆ ಪಾಸಿಟಿವ್ ಬಂದಿರಬಹುದಾದ ಸಾಧ್ಯತೆಗಳಿರಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ 60ಕ್ಕೂ ಹೆಚ್ಚು ಜನರ ಸ್ಯ್ವಾಬ್‌ನ್ನು ಆರೋಗ್ಯ ಇಲಾಖೆ ಸಂಗ್ರಹಿಸಿತ್ತು. ಬುಧವಾರ ವರದಿ ಬಂದಾಗ ಮುದೂರ ಗ್ರಾಮದ ಬಡಾವಣೆಯೊಂದರಲ್ಲಿ ವಾಸಿಸುತ್ತಿರುವ ಎರಡು ಕುಟುಂಬದಲ್ಲಿ ಮಕ್ಕಳಿಗೂ ಸೇರಿ 21 ಜನಕ್ಕೆ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಕೂಡಲೇ ಕಾರ್ಯ ಪ್ರವೃತ್ತರಾದ ಪಂಚಾಯಿತಿ ಟಾಸ್ಕ್ ಫೋರ್ಸ್ ಕಮಿಟಿ ಸೋಂಕಿತರನ್ನು ಮುದ್ದೇಬಿಹಾಳದ ಕೋವಿಡ್ ಕೇರ್ ಸೆಂಟರ್‌ಗೆ ಸ್ಥಳಾಂತರಿಸುವ ಬಗ್ಗೆ ಮನವೊಲಿಸಲು ಮುಂದಾಗಿದೆ. ಆದರೆ ಇದಕ್ಕೊಪ್ಪದ ಸೋಂಕಿತರು ನಮಗೆ ಯಾವುದೇ ಲಕ್ಷಣಗಳಿಲ್ಲ. ಆದರೂ ವರದಿ ಪಾಸಿಟಿವ್ ಎಂದು ಬಂದಿದೆ. ಹೊಲದಲ್ಲೋ ಮನೆಯಲ್ಲೋ ಹೇಗೋ ಇರುತ್ತೇವೆ. ಆ ಕೋವಿಡ್ ಕೇರ್ ಸೆಂಟರ್‌ಗೆ ಹಾಕಿ ಅಲ್ಲಿ ಪಾಸಿಟಿವ್ ಇದ್ದವರ ಸಂಪರ್ಕಕ್ಕೆ ಬಂದು ಮತ್ತಷ್ಟು ಸೋಂಕು ಹೆಚ್ಚಾಗಬಾರದು. ಹಾಗಾಗಿ ನಮ್ಮನ್ನು ಇಲ್ಲಿಯೇ ಇರಲು ಬಿಡಿ. ನಮ್ಮನ್ನು ಮತ್ತೊಮ್ಮೆ ತಪಾಸಣೆ ಮಾಡಿಸಿ. ಇಲ್ಲವೇ ನಮ್ಮೂರ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಿರಿ ಅಲ್ಲಿರುತ್ತೇವೆ ಎಂದು ಸೋಂಕಿತರು ಮನವಿ ಮಾಡಿದ್ದಾರೆ.
ಆದರೆ ಪಂಚಾಯಿತಿ ಟಾಸ್ಕ್ ಫೋರ್ಸ್ ಇದಕ್ಕೆ ಒಪ್ಪಿಲ್ಲ. ಈ ಕುರಿತು ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಾ ಮುದಗಲ್, ಯರಝರಿ ಗ್ರಾಪಂ ವ್ಯಾಪ್ತಿಯ ಮುದೂರು ಗ್ರಾಮದಲ್ಲಿ ಹೆಚ್ಚು ಪಾಸಿಟಿವ್ ಕೇಸ್ ಕಂಡು ಬಂದಿರುವ ಕಾರಣ ಗ್ರಾಮದ ಒಂದು ಬಡಾವಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸರ್ ಸಿಂಪಡಿಸಲಾಗಿದ್ದು ಗ್ರಾಮಸ್ಥರಿಗೂ ತಿಳಿ ಹೇಳಲಾಗಿದೆ ಎಂದರು.
ಈ ಸಂದರ್ಭ ಗ್ರಾಪಂ ಅಧ್ಯಕ್ಷೆ ಸೀತವ್ವ ಸಂಗಪ್ಪ ಭಜಂತ್ರಿ, ಗ್ರಾಪಂ ಕಾರ್ಯದರ್ಶಿ ವಿಲಾಸ ಲಮಾಣಿ, ಎಎಸ್‌ಐ ಎ.ಬಿ.ಟಕ್ಕಳಕಿ ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.
ಜಂಗರಮುರಾಳದಲ್ಲೂ ಆತಂಕ :
ಹಿರೇಮುರಾಳ ಗ್ರಾಪಂ ವ್ಯಾಪ್ತಿಯ ಜಂಗಮುರಾಳ ಗ್ರಾಮದಲ್ಲಿ 7 ಜನರಿಗೆ ಕೋವಿಡ್ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಗ್ರಾಮವನ್ನು ಸೂಕ್ಷ್ಮ ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ. ಆದರೆ ಅಡವಿ ಸೋಮನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಗ್ರಾಮ ಒಳಪಡುತ್ತಿದ್ದು, ಈ ಗ್ರಾಮಕ್ಕೆ ವೈದ್ಯರಾಗಲೀ, ಆಶಾ, ಅಂಗನವಾಡಿ, ಪಂಚಾಯಿತಿ ಅಧಿಕಾರಿಗಳಾಗಲೀ ಭೇಟಿ ನೀಡಿ ಪರಿಶೀಲನೆ ಮಾಡುವ ಗೋಜಿಗೆ ಹೋಗಿಲ್ಲ ಎಂಬ ಆರೋಪ ಕೇಳಿ ಬಂದಿವೆ.