ವಿಜಯಪುರ: ನಗರದ ರಾಜಗುರು ಫುಡ್ಸ್ ಗೋದಾಮಿನಲ್ಲಿ ಸಂಭವಿಸಿದ ದುರಂತದಲ್ಲಿ ಏಳು ಕಾರ್ಮಿಕರು ಸಾವನ್ನಪ್ಪಿದ್ದು, ಬಹುತೇಕ ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ಮೃತರನ್ನು ರಾಜೇಶ್ ಮುಖಿಯಾ (25), ರಾಮಬ್ರೀಜ್ ಮುಖಿಯಾ (29), ಶಂಭು ಮುಖಿಯಾ (26), ಲುಖೋ ಜಾಧವ್ (45), ರಾಮ್ ಬಾಲಕ್ (52), ಕಿಶನ್ ಕುಮಾರ್ ಮತ್ತು ದಾಲಚಂದ ಮುಖಿನ್ ಎಂದು ಗುರುತಿಸಲಾಗಿದೆ.
ಫುಡ್ ಪ್ರೊಸೆಸಿಂಗ್ ಯುನಿಟ್ನಲ್ಲಿ ಕೆಲಸ ಮಾಡುತ್ತಿದ್ದಾಗ ಮೆಕ್ಕೆಜೋಳ ಮೂಟೆ ತುಂಬುವ ಯಂತ್ರ ಕುಸಿದ ಪರಿಣಾಮ ಈ ಅವಘಡ ಸಂಭವಿಸಿದೆ. 11 ಕಾರ್ಮಿಕರು ಸಿಲುಕಿದ್ದು ಘಟನಾ ಸಂದರ್ಭದಲ್ಲಿ ಮೂವರು ಬಚಾವ್ ಆಗಿದ್ದರು. ರಕ್ಷಣಾ ಕಾರ್ಯಾಚರಣೆ ವೇಳೆ ಕಾರ್ಮಿಕನೊಬ್ಬನನ್ನು ರಕ್ಷಿಸಲಾಗಿತ್ತು. ಉಳಿದ ಏಳು ಕಾರ್ಮಿಕರು ಮೆಕ್ಕೆಜೋಳದ ಚೀಲಗಳ ಅಡಿ ಸಿಲುಕಿದ್ದರಿಂದ ಉಸಿರಾಡಲು ಸಾಧ್ಯವಾಗದೇ ಸಾವನ್ನಪ್ಪಿದ್ದಾರೆ.
ಗೋದಾಮಿಗೆ ಸಚಿವ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ ಅವರು ಕಾರ್ಮಿಕರು ಸಿಲುಕಿಕೊಂಡಿರುವ ರಾಜಗುರು ಮೆಕ್ಕೆಜೋಳ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯ ಪರಿಶೀಲನೆ ನಡೆಸಿದರು. ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನದಲ್ಲಿದ್ದ ಸಚಿವರು, ಸುದ್ದಿ ತಿಳಿಯುತ್ತಿದ್ದಂತೆ ನಗರಕ್ಕೆ ದೌಡಾಯಿಸಿ ಘಟನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲದೇ, ಕಾರ್ಮಿಕರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದು ಭೀಕರ ದುರಂತ. ಬೇರೆ ರಾಜ್ಯದಿಂದ ಇಲ್ಲಿಗೆ ಬಂದು ಕೆಲಸ ಮಾಡುತ್ತಿರುವಾಗ ಅನಾಹುತ ಸಂಭವಿಸಿದೆ. ಈಗಲೂ ನಮ್ಮ ಪ್ರಥಮ ಆದ್ಯತೆ ಕಾರ್ಮಿಕರ ರಕ್ಷಣೆ ಆಗಿದೆ. ಕಾರ್ಮಿಕರ ಮೃತದೇಹಗಳನ್ನು ಅವರ ಮನೆಗಳಿಗೆ ತಲುಪಿಸುವಂತಹ ಕಾರ್ಯ ಮಾಡಲಾಗುತ್ತಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದಿದ್ದೇನೆ. ಮುಖ್ಯಮಂತ್ರಿಗಳಿಗೂ ಸಹ ಈ ಕುರಿತು ಮಾಹಿತಿ ನೀಡಿದ್ದೇನೆ. ಗಾಯಾಳುಗಳಿಗೆ ಸಿಎಂ ಜೊತೆ ಮಾತನಾಡಿ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ ಎಂದರು.
ಮೃತ ಕಾರ್ಮಿಕರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರದ ಭರವಸೆ ನೀಡಿದ ಸಚಿವರು, ಮಾಲೀಕರು ಕೂಡ ಅವರ ಕೆಲಸಗಾರರಿಗೆ ಪರಿಹಾರ ಕೊಡಬೇಕು. ಗೋದಾಮಿನ ಮಾಲೀಕರಿಂದಲೂ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇವೆ. 7 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸಂಪೂರ್ಣ ಕಾರ್ಯಾಚರಣೆ ಮುಗಿದ ನಂತರ ಎಲ್ಲ ಮಾಹಿತಿ ದೊರೆಯಲಿದೆ. ಕಾರ್ಮಿಕರು ಮತ್ತು ಮೃತರ ಕುಟುಂಬಸ್ಥರು ದುಃಖದಲ್ಲಿದ್ದಾರೆ. ಈ ಹಿಂದೆ ಇದೇ ರೀತಿ ಇಬ್ಬರು ಕಾರ್ಮಿಕರ ಸಾವು ಆದಾಗ ಮಾಲೀಕರು ಪರಿಹಾರ ಮತ್ತು ಮೃತರ ದೇಹ ಕೂಡ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿವೆ. ಅದನ್ನು ತನಿಖೆ ನಡೆಸುತ್ತೇವೆ. ತಪ್ಪಾಗಿದ್ದಲ್ಲಿ ಕ್ರಮ ಜರುಗಿಸುತ್ತೇವೆ. ಎಷ್ಟೇ ಪ್ರಭಾವಿ ಆಗಿದ್ರೂ ಸರ್ಕಾರ ಮತ್ತು ಮಾಧ್ಯಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಈ ಹಿಂದೆ ಇಬ್ಬರು ಕಾರ್ಮಿಕರು ಸಾವಾಗಿದ್ದಾಗ ಪರಿಹಾರದ ಜೊತೆಗೆ ಮೃತದೇಹ ಕೊಟ್ಟಿಲ್ಲ ಅಂತ ಆರೋಪಿಸಿ ಪ್ರತಿಭಟನೆ ಕೈಗೊಂಡಿದ್ದ ಬಿಹಾರ ಕಾರ್ಮಿಕರನ್ನು ಇದೇ ವೇಳೆ, ಸಚಿವರು ಮನವೊಲಿಸಿದರು.
ಮೃತದೇಹ ಕೊಂಡೊಯ್ಯಲು ದಾರಿ ಬಿಡದ ಕಾರ್ಮಿಕರು: ಇನ್ನು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಕಾರ್ಮಿಕರ ಮೃತದೇಹ ಪತ್ತೆಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಗ್ಯಾಸ್ ಕಟರ್ ಮೂಲಕ ಕಬ್ಬಿಣದ ರಾಡ್ಗಳನ್ನು ಕತ್ತರಿಸಿ ಕಾರ್ಮಿಕನ ಶವ ಹೊರತೆಗೆದರು. ಕಾರ್ಮಿಕರ ಮೃತದೇಹಗಳನ್ನು ಆ್ಯಂಬುಲೆನ್ಸ್ ಮೂಲಕ ಕೊಂಡೊಯ್ಯುತ್ತಿದ್ದಾಗ ಸ್ಥಳದಲ್ಲಿದ್ದ ಬಿಹಾರದ ಕಾರ್ಮಿಕರು ಪ್ರತಿಭಟನೆ ಕೈಗೊಂಡರು. ಆಂಬ್ಯುಲೆನ್ಸ್ಗೆ ದಾರಿ ಬಿಡದ ಕಾರ್ಮಿಕರು, ಮೊದಲು ಪರಿಹಾರ ಘೋಷಿಸಿ, ನಂತರ ಮೃತದೇಹವನ್ನು ಕೊಂಡೊಯ್ಯಿರಿ ಎಂದು ಪಟ್ಟು ಹಿಡಿದಿದ್ದರು. ಬಳಿಕ ಸಚಿವರು ಅವರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಕ್ರೇನ್ನಿಂದ ಕಾರ್ಯಾಚರಣೆ ವಿಫಲ: ನಿರಂತರವಾಗಿ 15ಗಂಟೆಯಿಂದಲೂ ಕಾರ್ಯಾಚರಣೆ ನಡೆಸಲಾಯಿತು. ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ ಕ್ರೇನ್ ಮೂಲಕ ಕಾರ್ಯಾಚರಣೆ ನಡೆಸಲಾಗಿತ್ತು. ನಾಲ್ಕು ಕ್ರೇನ್ ಮೂಲಕ, ಚೀಲಗಳ ಅಡಿ ಸಿಲುಕಿದ ಕಾರ್ಮಿಕರ ಮೃತದೇಹ ಹೊರತೆಗೆಯಲು ಪ್ರಯತ್ನಿಸಲಾಗಿತ್ತು. ಆದರೆ ಅದು ವಿಫಲವಾಗಿದ್ದು, ಮತ್ತೆ ಜೆಸಿಬಿ ಮೂಲಕ ಕಾರ್ಯಾಚರಣೆ ಮುಂದುವರೆಸಲಾಯಿತು. ಡಿಸಿ ಟಿ ಭೂಬಾಲನ್ ಮತ್ತು ಎಸ್ಪಿ ಋಷಿಕೇಶ್ ಸೋನಾವಣೆ ಸ್ಥಳದಲ್ಲಿ ಬೀಡುಬಿಟ್ಟಿದ್ದರು.
ಕಾರ್ಯಾಚರಣೆ ವೇಳೆ ಕಾರ್ಮಿಕನ ರಕ್ಷಣೆ: ಸ್ಥಳದಲ್ಲಿ ಎಸ್ಡಿಆರ್ಎಫ್ ತಂಡ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಕಾರ್ಯಾಚರಣೆ ಸಾಗಿತ್ತು. ಏಳು ಮೃತ ಕಾರ್ಮಿಕರ ದೇಹ ಹೊರಕ್ಕೆ ತರಲಾಗಿದೆ. ದುರಂತದಲ್ಲಿ ಸಿಲುಕಿರುವ ಕಾರ್ಮಿಕರ ಪತ್ತೆಗೆ ಪುಣೆಯಿಂದ ಆಗಮಿಸಿದ್ದ 30ಕ್ಕೂ ಅಧಿಕ ಸಿಬ್ಬಂದಿ ಇರುವ ಎನ್ಡಿಆರ್ಎಫ್ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.
ಓದಿ: ವಿಜಯಪುರ: ಆಹಾರ ಶೇಖರಣಾ ಗೋದಾಮಿನಲ್ಲಿ ಸಿಲುಕಿರುವ 10ಕ್ಕೂ ಹೆಚ್ಚು ಕಾರ್ಮಿಕರು; ರಕ್ಷಣಾ ಕಾರ್ಯ ಚುರುಕು