ವಿಜಯಪುರ: ಕೊರೊನಾ ವೈರಸ್ ಹರಡದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ ಸೂಚಿಸಿದರು.
ರಾಜ್ಯದಲ್ಲಿ ವೈರಸ್ ಹಾವಳಿ ಇದೆ. ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯಿಂದ ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಜೊತೆಗೆ ಜಿಲ್ಲಾ ಆರೋಗ್ಯ ಅಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ರಚಿಸಲಾಗಿದೆ. ಅಲ್ಲದೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸಮಿತಿ ರಚಿಸಲಾಗಿದ್ದು, ಕೊರೊನಾ ಜಾಗೃತಿ ಜೊತೆಗೆ ಶಂಕಿತರಿಗೆ ಸರಿಯಾಗಿ ಚಿಕಿತ್ಸೆ ನೀಡಬೇಕು. ಜಿಲ್ಲೆಯಲ್ಲಿ ವೈರಸ್ ಲಕ್ಷಣಗಳು ಕಂಡು ಬಂದರೆ, ಅವರಿಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಬೇಕು ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ನಿರಂತರವಾಗಿ ಸಮಿತಿ ಸದಸ್ಯರ ಜೊತೆ ಸಂಪರ್ಕದಲ್ಲಿದ್ದು, ಕೊರೊನಾ ಕುರಿತಾಗಿ ಮಾಹಿತಿ ಕಲೆ ಹಾಕಬೇಕು. ರೈಲು ಹಾಗೂ ಬಸ್ ನಿಲ್ದಾಣದಲ್ಲಿ ಹೆಲ್ಪ್ ಡೆಸ್ಕ್ ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಿದೇಶಿದಿಂದ ಜಿಲ್ಲೆಗೆ ಮರಳಿದ ವ್ಯಕ್ತಿಗಳ ಮೇಲೆ ಆರೋಗ್ಯಾಧಿಕಾರಿಗಳು 14 ದಿನಗಳ ಕಾಲ ನಿಗಾ ವಹಿಸಬೇಕು. ಇನ್ನು ಜಿಲ್ಲೆಯಿಂದ 10 ಜನ ಹಜ್ ಯಾತ್ರೆ ತೆರಳಿದವರನ್ನ ಹಜ್ ಕಮಿಟಿ ಮೂಲಕ ಸಂಪರ್ಕ ಮಾಡಲಾಗಿದೆ. ಅವ್ರು ಜಿಲ್ಲೆಗೆ ಮರಳಿದ ತಕ್ಷಣವೇ ಅವ್ರ ಆರೋಗ್ಯ ತಪಾಸಣೆ ಹಾಗೂ ಗಂಟಲು ದ್ರವ ಪರೀಕ್ಷೆ ನಡೆಸಬೇಕು. ಸಾಮಾಜಿಕ. ಜಾಲತಾಣಗಳಲ್ಲಿ ಕೊರೊನಾ ಕುರಿತು ಯಾವುದೇ ತಪ್ಪು ಮಾಹಿತಿ ರವಾನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ ಹೇಳಿದರು.
ಸಭೆಯಲ್ಲಿ ಜಿಪಂ ಸಿಇಓ ಗೋವಿಂದ ರೆಡ್ಡಿ, ಎಡಿಸಿ ಔದ್ರಾಮ್, ಡಿಹೆಚ್ಓ ಮಹೇಂದ್ರ ಕಾಪ್ಸೆ ಸೇರಿದಂತೆ ಅನೇಕ ಇಲಾಖೆಗಳ ಅಧಿಕಾರಿಗಳು ಭಾಗಿಯಾಗಿದ್ದರು.