ವಿಜಯಪುರ: ಪ್ರವಾಸೋದ್ಯಮ ಉತ್ತೇಜನಕ್ಕೆ ಜಿಲ್ಲೆಗೆ ಬೇಕಿರುವ ವಿಮಾನ ನಿಲ್ದಾಣ ಕಾಮಗಾರಿ ಆರಂಭ ವಿಳಂಬ ಆಗುತ್ತಿರುವುದು ಪ್ರವಾಸಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ವಿಮಾನ ನಿಲ್ದಾಣದಿಂದ ವ್ಯಾಪಾರ ವಹಿವಾಟಿಗೆ ಉತ್ತೇಜನ ದೊರೆಯುತ್ತದೆ ಎಂದು ಕನಸು ಕಾಣುತ್ತಿದ್ದ ವ್ಯಾಪಾರಿಗಳು ಸಹ ದಾರಿದೋಚದೆ ಸುಮ್ಮನಾಗಿದ್ದಾರೆ. ಸರ್ಕಾರಿ ಇಲಾಖೆಗಳ ಹೊಂದಾಣಿಕೆ ಕೊರತೆಯಿಂದ ಕಾಮಗಾರಿ ಟೆಂಡರ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎನ್ನಲಾಗ್ತಿದೆ. ಆದರೆ ಸರ್ಕಾರ ಮಾತ್ರ ವರ್ಷದೊಳಗೆ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡುವ ಆತ್ಮವಿಶ್ವಾಸ ಹೊಂದಿದೆ.
ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಿಸಬೇಕೆಂದು ದಶಕಗಳ ಹಿಂದೆ ಕಲಬುರಗಿ ಹಾಗೂ ವಿಜಯಪುರದಲ್ಲಿ ಕಾಮಗಾರಿಗೆ ಅಂದಿನ ಸಿಎಂ ಆಗಿದ್ದ ಯಡಿಯೂರಪ್ಪ ಶಂಕು ಸ್ಥಾಪನೆ ನೇರವೇರಿಸಿದ್ದರು. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ವಿಜಯಪುರದಲ್ಲಿ ಇನ್ನೂ ಕಾಮಗಾರಿ ಆರಂಭಕ್ಕೆ ಟೆಂಡರ್ ಪ್ರಕ್ರಿಯೆ ಹಂತದಲ್ಲಿಯೇ ಉಳಿದಿದೆ. ಆಗಲೇ ಕಲಬುರಗಿಯಲ್ಲಿ ವಿಮಾನ ಹಾರಾಟ ಆರಂಭವಾಗಿದೆ. ಕಳೆದ ಮೂರು ತಿಂಗಳ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಅನುಮೂದನೆ ಪಡೆದು ಡಿಸಿಎಂ ಗೋವಿಂದ ಕಾರಜೋಳ ತರಾತುರಿಯಲ್ಲಿ ಸ್ಥಳ ಪರಿಶೀಲನೆ ನಡೆಸಿ ನವೆಂಬರ್ನಲ್ಲೇ ಕಾಮಗಾರಿ ಆರಂಭವಾಗುತ್ತದೆ ಎಂದು ಹೇಳಿದ್ದರು. ಈಗ ಡಿಸೆಂಬರ್ ಮೊದಲ ವಾರ ಕಳೆದರೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇದಕ್ಕೆ ಮೂಲಭೂತ ಸೌಕರ್ಯ ಇಲಾಖೆಯಿಂದ ಕೆಲ ಕೆಲಸಕ್ಕೆ ಅನುಮತಿ ದೊರೆಯಬೇಕಾಗಿತ್ತು. ಈ ಕಾರಣಕ್ಕೆ ಟೆಂಡರ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎನ್ನುವುದು ಜನಪ್ರತಿನಿಧಿಗಳ ವಾದವಾಗಿದೆ.
ಓದಿ:ರಾಹುಲ್, ಪ್ರಿಯಾಂಕ ಗಾಂಧಿ ಕ್ರಾಸ್ ಬ್ರೀಡ್ ಅಂತ ಸಿದ್ದರಾಮಯ್ಯ ಒಪ್ಕೊತಾರಾ?: ಸಚಿವ ಕೆ.ಎಸ್.ಈಶ್ವರಪ್ಪ
ಮುಖ್ಯವಾಗಿ ಬುರಣಾಪುರದಲ್ಲಿ ಸ್ಥಾಪಿಸಬೇಕಾಗಿರುವ ವಿಮಾನ ನಿಲ್ದಾಣ ಕಾಮಗಾರಿಯ 728 ಎಕರೆ ಭೂಮಿ ಸಮತಟ್ಟು ಮಾಡುವ ವಿಚಾರವಾಗಿ ಕಳೆದ ಒಂದು ದಶಕದಿಂದ ರಾಷ್ಟ್ರೀಯ ಪಕ್ಷಗಳಲ್ಲಿ ಪರ-ವಿರೋಧ ಹೇಳಿಕೆಗಳೇ ಸದ್ದು ಮಾಡಿವೆ. ಸದ್ಯ 220 ಕೋಟಿ ರೂ. ವೆಚ್ವದಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣವಾಗಬೇಕಾಗಿದೆ. ಇದಕ್ಕೆ ಟೆಂಡರ್ ಎರಡು ಬಾರಿ ಕರೆಯಲಾಗಿದೆ. ಭೂಮಿ ಸಮತಟ್ಟು ಮಾಡಲು ಹೆಚ್ಚು ವೆಚ್ಚ ತಗಲುವ ಕಾರಣ ಟೆಂಡರ್ ಗುತ್ತಿಗೆ ಪಡೆಯಲು ವಿಳಂಬವಾಗುತ್ತಿದೆ. ಮೂಲಭೂತ ಸೌಕರ್ಯಗಳ ಇಲಾಖೆ ಭೂಮಿ ಸಮತಟ್ಟು ಮಾಡಬೇಕಿತ್ತು. ಅವರಿಂದ ಆಗದ ಕಾರಣ ಪಿಡಬ್ಲ್ಯೂಡಿ ಇಲಾಖೆ ಕೈಗೆತ್ತುಕೊಂಡಿದೆ. ಮೊದಲು ಹಂತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಮೇಲೆಯೇ ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಬೇಕಾಗಿದೆ. ಕೇವಲ ಒಂದು ವರ್ಷದಲ್ಲಿ ಲೋಹದ ಹಕ್ಕಿ ಹಾರಾಟ ನಡೆಸುವುದಾಗಿ ಸರ್ಕಾರ ಹೇಳುತ್ತಿದ್ದರೂ, ಸದ್ಯಕ್ಕೆ ಈ ಕನಸು ನನಸಾಗುವುದು ಅಸಾಧ್ಯದ ಮಾತಾಗಿದೆ. ಇನ್ನೂ ಕೆಲ ವರ್ಷ ಪ್ರವಾಸಿಗರು ವಿಮಾನ ಹಾರಾಟದ ಕನಸು ಕನಸಾಗೇ ಉಳಿದಿದೆ.