ಮುದ್ದೇಬಿಹಾಳ(ವಿಜಯಪುರ) : ನೀರು ಕುಡಿಯಲೆಂದು ಕೃಷ್ಣಾ ನದಿಗೆ ಇಳಿದಿದ್ದ ಬಾಲಕಿ ಕಾಲುಜಾರಿ ಗುಂಡಿಯಲ್ಲಿ ಬಿದ್ದು ಮುಳುಗಿದ್ದನ್ನು ಕಂಡ ಆಕೆಯ ಅತ್ತೆ ಅವಳನ್ನು ಉಳಿಸಲು ಹೋಗಿ ತಾನೂ ನೀರುಪಾಲಾಗಿರುವ ಘಟನೆ ತಾಲೂಕಿನ ಹುನಕುಂಟಿ ಗ್ರಾಮದಲ್ಲಿ ಇಂದು ನಡೆದಿದೆ.
ಹುನಕುಂಟಿ ಗ್ರಾಮದವರಾದ ಶಾಂತಮ್ಮ ಭೀಮನಗೌಡ ನಾಗೋಡ (20) ಹಾಗೂ 8 ವರ್ಷ ವಯಸ್ಸಿನ ಗುರುಸಂಗಮ್ಮ ಭೀಮಪ್ಪ ಮುದೂರ(ಸಂಬಂಧದಲ್ಲಿ ಮೃತರಿಬ್ಬರೂ ಅತ್ತೆ-ಸೊಸೆ) ಸಾವನ್ನಪ್ಪಿದವರು ಎಂದು ತಿಳಿದು ಬಂದಿದೆ. ದನ ಮೇಯಿಸಲೆಂದು ನದಿ ತೀರಕ್ಕೆ ಇಬ್ಬರು ಹೋಗಿದ್ದರು. ಬಾಯಾರಿಕೆ ಆಗಿದ್ದರಿಂದ ಗುರುಸಂಗಮ್ಮ ನೀರು ಕುಡಿಯಲೆಂದು ನದಿಗೆ ಇಳಿದಿದ್ದಾಳೆ. ನದಿ ತೀರದಲ್ಲಿ ಅಲ್ಲಲ್ಲಿ ಮಣ್ಣು ತೆಗೆದಿದ್ದರಿಂದ ಆಳವಾದ ಗುಂಡಿಗಳಿದ್ದು, ಅವುಗಳು ಭರ್ತಿಯಾಗಿರುವುದನ್ನು ತಿಳಿಯದೇ ಬಾಲಕಿ ಗುರುಸಂಗಮ್ಮ ಕಾಲು ಜಾರಿ ಗುಂಡಿಯೊಳಗೆ ಬಿದ್ದಿದ್ದಾಳೆ. ಇದನ್ನು ಗಮನಿಸಿದ ಅತ್ತೆ ಶಾಂತಾ ಆಕೆಯ ರಕ್ಷಣೆಗೆ ತೆರಳಿದ್ದು, ಆಕೆಯೂ ಕೂಡ ನೀರುಪಾಲಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ಠಾಣೆಯ ಅಧಿಕಾರಿ ಪ್ರಮೋದ ಬಿ.ಎಸ್. ನೇತೃತ್ವದ ತಂಡ ಸ್ಥಳಕ್ಕಾಗಮಿಸಿ ನೀರಿನ ಗುಂಡಿಯಲ್ಲಿ ಮುಳುಗಿದ್ದ ಇಬ್ಬರ ಶವವನ್ನು ಕಾರ್ಯಾಚರಣೆ ಮೂಲಕ ಹೊರ ತೆಗೆದರು. ಸ್ಥಳಕ್ಕೆ ಪಿಎಸೈ ಎಂ.ಬಿ. ಬಿರಾದಾರ, ಗ್ರಾಮಲೆಕ್ಕಾಧಿಕಾರಿ ಸುನೀಲ್ ಚವ್ಹಾಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.