ವಿಜಯಪುರ: ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಎನ್ಕೌಂಟರ್ ಹಾಗೂ ಆತನ ಸಹೋದರ ಗಂಗಾಧರ ಚಡಚಣ ಅವರ ಅನುಮಾನಾಸ್ಪದ ಸಾವು ಪ್ರಕರಣ ಮತ್ತೊಮ್ಮೆ ಭೀಮಾ ತೀರದಲ್ಲಿ ಸದ್ದು ಮಾಡಿದೆ.
ಧರ್ಮರಾಜ್ ಎನ್ಕೌಂಟರ್ ಪ್ರತ್ಯಕ್ಷ ಸಾಕ್ಷಿ ಸಚಿನ್ ಚವ್ಹಾಣ್ ಪ್ರಕಾರ, ಅಂದು ನಡೆದಿದ್ದು ನಕಲಿ ಎನ್ಕೌಂಟರ್. ನನ್ನ ಎದುರಿಗೆ ಆ ಘಟನೆ ನಡೆದಿತ್ತು. ಧರ್ಮರಾಜ್ ಚಡಚಣ ಸಾಯುವವರೆಗೂ ಆ್ಯಂಬುಲೆನ್ಸ್ ತರಲು ಪೊಲೀಸರು ಅವಕಾಶ ನೀಡಲಿಲ್ಲವಂತೆ.
ಇದರ ಪೂರ್ಣ ಸತ್ಯ ಸಂಗತಿಯನ್ನು ಸಿಒಡಿ ತನಿಖಾ ತಂಡದ ಎದುರು ಹೇಳಿಕೊಂಡಿದ್ದೇನೆ. ಈ ಪ್ರಕರಣದಲ್ಲಿ ಪ್ರಭಾವಿ ಮಾಜಿ ಸಚಿವ, ಹಿರಿಯ ಪೊಲೀಸ್ ಅಧಿಕಾರಿಗಳ ಕೈವಾಡವಿದ್ದು, ಕೂಡಲೇ ಸಿಬಿಐ ತನಿಖೆಯಾಗಲಿ ಎನ್ನುವ ಮೂಲಕ ಮತ್ತೊಮ್ಮೆ ಭೀಮಾ ತೀರದ ಇತಿಹಾಸದ ಕರಾಳ ಮುಖ ತೆರೆದುಕೊಂಡಿದೆ.
ಭೀಮಾತೀರದಲ್ಲಿ ಎರಡು ಕುಟುಂಬದ ನಡುವಿನ ದ್ವೇಷ ಹಲವರನ್ನು ಬಲಿ ತೆಗೆದುಕೊಂಡಿದ್ದರೂ ಅದು ತಣ್ಣಗಾಗುತ್ತಿಲ್ಲ. 2017ರ ಅಕ್ಟೋಬರ್ 30ರಂದು ಕೊಂಕಣ ಗಾಂವದಲ್ಲಿ ನಡೆದ ಧರ್ಮರಾಜ್ ಚಡಚಣ ಎನ್ಕೌಂಟರ್ ಪ್ರಕರಣ ಭೀಮಾತೀರವಷ್ಟೇ ಅಲ್ಲ ಇಡಿ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಅಂದೇ ಆತನ ಸಹೋದರ ಗಂಗಾಧರ ಚಡಚಣ ಸಹ ನಾಪತ್ತೆಯಾಗಿದ್ದ. ಆತ ಎಲ್ಲಿ ಹೋದ, ಅವನ ಕೊಲೆ ಸಹ ನಡೆದು ಹೋಯಿತಾ? ಎನ್ನುವ ಪ್ರಶ್ನೆ ಈಗಲೂ ಭೀಮೆಯ ಒಡಲಿನಲ್ಲಿ ರಹಸ್ಯವಾಗಿಯೇ ಉಳಿದಿದೆ.

ಧರ್ಮರಾಜ್ ಚಡಚಣ ಎನ್ಕೌಂಟರ್ ಪ್ರತ್ಯಕ್ಷ ಸಾಕ್ಷಿಯಾಗಿರುವ ಸಚಿನ್ ಚವ್ಹಾಣ ಅಂದು ನಡೆದಿದೆ ಎನ್ನಲಾದ ಘಟನೆಯ ವಿವರವನ್ನು ಬಹಿರಂಗ ಪಡಿಸಿದ್ದಾನೆ. ನನ್ನ ಎದುರೇ ಪೊಲೀಸ್ ಅಧಿಕಾರಿ ಧರ್ಮರಾಜ್ಗೆ ಗುಂಡಿಕ್ಕಿ ಅದೇ ಪಿಸ್ತೂಲ್ದಿಂದ ತನ್ನ ಕೈಗೆ ಗುಂಡು ಹೊಡೆದು ಕೊಂದಿದ್ದಾರೆ. ಧರ್ಮರಾಜ್ನನ್ನು ಆಸ್ಪತ್ರೆಗೆ ಸಾಗಿಸಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾನೆ. ಅಷ್ಟೇ ಅಲ್ಲದೇ ಈ ಎಲ್ಲ ವಿವರವನ್ನು ಸಿಒಡಿ ತನಿಖಾಧಿಕಾರಿಗಳ ಎದುರಿಗೆ ಹೇಳಿಕೆ ಸಹ ನೀಡಿದ್ದೇನೆ. ಆದರೂ ಪ್ರಕರಣದಲ್ಲಿ ಕೆಲವರು ಮಾತ್ರ ಜೈಲು ಸೇರಿದ್ದಾರೆ. ಇನ್ನೂ 8-10 ಜನ ಹಾಯಾಗಿ ಹೊರಗಿದ್ದಾರೆ. ಅವರನ್ನು ಹಿಡಿದು ಶಿಕ್ಷಿಸಲು ಎನ್ಕೌಂಟರ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಚವ್ಹಾಣ್ ಒತ್ತಾಯಿಸಿದ್ದಾನೆ.
2017 ಅಕ್ಟೋಬರ್ 30ರಂದು ಧರ್ಮರಾಜ್ ಚಡಚಣ ಎನ್ಕೌಂಟರ್ ನಡೆದಿತ್ತು. ಇದರ ಹಿಂದಿನ ರೂವಾರಿ ಮಹಾದೇವ ಸಾಹುಕಾರ ಭೈರಗೊಂಡ ಎನ್ನಲಾಗ್ತಿದೆ. ಆದರೂ ಭೈರಗೊಂಡ ಅವರಿಗೆ ನ್ಯಾಯಾಲಯದಲ್ಲಿ ಜಾಮೀನು ದೊರೆತಿದೆ. ಹಣದ ಬಲದಿಂದ ಜೈಲಿನಿಂದ ಹೊರಕ್ಕೆ ಬಂದು ಈಗ ನನಗೂ ಹಾಗೂ ನನ್ನ ಮಗ ಧರ್ಮರಾಜ್ ಚಡಚಣ ಬೆಂಬಲಿಗ ಸ್ನೇಹಿತರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಗಂಗಾಧರ ಚಡಚಣನ ತಾಯಿ ವಿಮಲಾಬಾಯಿ ಆಗ್ರಹಿಸಿದ್ದಾರೆ.
ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಎನ್ಕೌಂಟರ್ ಹಾಗೂ ಆತನ ಸಹೋದರ ಗಂಗಾಧರ ಚಡಚಣ ನಿಗೂಢ ಸಾವನ್ನು ಸಿಬಿಐ ತನಿಖೆಗೆ ನೀಡಬೇಕೆಂದು 2019ರ ಸೆಪ್ಟೆಂಬರ್ 12ರಂದು ಮುಖ್ಯಮಂತ್ರಿಗಳಿಗೆ, 2019ರ ಅಕ್ಟೋಬರ್ 4ರಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಹಾಗೂ 2020 ಸೆಪ್ಟೆಂಬರ್ 23ರಂದು ವಿಧಾನಸೌಧದಲ್ಲಿ ಲಿಖಿತ ದೂರು ಹಾಗೂ ನಿನ್ನೆ ವಿಜಯಪುರ ಜಿಲ್ಲಾಧಿಕಾರಿಗೆ ವಿಮಲಾಬಾಯಿ ಚಡಚಣ ಮನವಿ ಸಲ್ಲಿಸಿದ್ದಾರೆ. ಈ ಕುರಿತಂತೆ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಎಂಬುದನ್ನು ಕಾದು ನೋಡಬೇಕಿದೆ.