ವಿಜಯಪುರ : ಜೋಳದ ನಾಡು ವಿಜಯಪುರದಲ್ಲಿ ಇತ್ತೀಚಿಗೆ ಲಾಭದಾಯಕ ರೇಷ್ಮೆ ಬೆಳೆ ಬೆಳೆಯಲು ಅನ್ನದಾತ ಒಲುವು ತೋರುತ್ತಿದ್ದಾನೆ. ಆದರೆ, ಇವರಿಗೆ ಸಲಹೆ ನೀಡಬೇಕಾದ ರೇಷ್ಮೆ ಉಪ ನಿರ್ದೇಶಕರ ಕಚೇರಿ ಮೂಲಸೌಲಭ್ಯಗಳಿಲ್ಲದೇ ಬಳಲುತ್ತಿರುವುದು ಕಂಡು ಬಂದಿದೆ.
ನಗರದ ನವರಸಪುರ ಫಾರ್ಮ್ ಈಗ ರೇಷ್ಮೆ ಇಲಾಖೆ ಕಚೇರಿಯಾಗಿದೆ. ಮೊದಲು ಆನಂದ ಮಹಲನಲ್ಲಿದ್ದ ಈ ಕಚೇರಿಯನ್ನು ಸುಮಾರು ನಾಲ್ಕು ಎಕರೆ ಭೂಮಿಯಲ್ಲಿ ಪಾಳು ಬಿದ್ದ ಈ ಕಟ್ಟಡಕ್ಕೆ 9 ತಿಂಗಳ ಹಿಂದೆ ಶಿಫ್ಟ್ ಮಾಡಲಾಗಿದೆ.
ಈ ಕೇಂದ್ರದಲ್ಲಿ ರೇಷ್ಮೆ ಉಪನಿರ್ದೇಶಕರ ಕಚೇರಿ ಮತ್ತು ಮಾರುಕಟ್ಟೆ ಕೇಂದ್ರವಿದೆ. ಉಳಿದ ಹಲವು ಕೊಠಡಿಗಳು ಪಾಳುಬಿದ್ದಿವೆ. ರಾತ್ರಿ ಇತ್ತ ಯಾರು ಸುಳಿಯುವುದಿಲ್ಲ. ಹಾಗಾಗಿ ಇದು ಒಂದು ರೀತಿ ಕುಡುಕರ ಅಡ್ಡೆಯಾಗಿದೆ. ಕಟ್ಟಡ ರಿಪೇರಿ ಮಾಡಿಸಲು ಇಲಾಖೆಗೆ ಅನುದಾನದ ಕೊರತೆ ಇದೆ ಎನ್ನಲಾಗಿದೆ. ಈಗಷ್ಟೇ ಕಟ್ಟಡಕ್ಕೆ ಕಾಂಪೌಂಡ್ ಕಟ್ಟಿಸಲಾಗುತ್ತಿದೆ. ಆದರೂ ಇಲಾಖೆ ಸಿಬ್ಬಂದಿಗೆ ಅಭದ್ರತೆ ಕಾಡುತ್ತಿದೆ ಎಂದು ಸಿಬ್ಬಂದಿ ತಿಳಿಸಿದರು.
ಜಿಲ್ಲೆಯಲ್ಲಿ 520 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. ಸರ್ಕಾರ ಸರಿಯಾಗಿ ಇಲಾಖೆಗೆ ಅನುದಾನ ನೀಡಿದ್ರೆ, ಇನ್ನೂ 200 ಹೆಕ್ಟೇರ್ ಪ್ರದೇಶ ಹೆಚ್ಚಿಸುವ ಅವಕಾಶವಿದೆ. ಪಾಳುಬಿದ್ದಿರುವ ಲಕ್ಷಾಂತರ ರೂ. ಮೌಲ್ಯದ ನೂಲಿನ ಯಂತ್ರಗಳು ತುಕ್ಕು ಹಿಡಿದಿವೆ. ನೂಲಿನ ಯಂತ್ರಗಳ 8 ಘಟಕಗಳಿದ್ದು, ಪ್ರಯೋಜನಕ್ಕೆ ಬಾರದಾಗಿದೆ.
ಇದರ ಜೊತೆ ರೇಷ್ಮೆ ಬೆಳೆಯುವ ಹಲವು ಉಪಕರಣಗಳು ಕೆಲ ಸಿಬ್ಬಂದಿ ಮಲಗುವ ಮಂಚಗಳಾಗಿವೆ. ಹಾಗಾಗಿ ಕೂಡಲೇ ಸರ್ಕಾರ ಮತ್ತು ರೇಷ್ಮೆ ಇಲಾಖೆ ಎಚ್ಚೆತ್ತು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.