ವಿಜಯಪುರ: ಜಿಲ್ಲೆಯಲ್ಲಿ ಕಲಾ ವಿಭಾಗದಲ್ಲಿ ರಾಹುಲ್ ರಾಠೋಡ ಎಂಬ ವಿದ್ಯಾರ್ಥಿ ಜಿಲ್ಲೆಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾನೆ. ವಿಜಯಪುರ ಜಿಲ್ಲೆಯ ತಾಳಿಕೋಟೆಯ ಎಸ್ ಕೆ ಪಿಯು ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ರಾಹುಲ್ 600 ಅಂಕಗಳಿಗೆ 592 ಅಂಕಗಳಿಸಿ ಸಾಧನೆ ಮೆರೆದಿರುವನು. ರಾಹುಲ್ ರಾಠೋಡ ಬಡತನದಲ್ಲಿ ಅರಳಿರುವ ಪ್ರತಿಭೆ. ಪ್ರಸ್ತುತ ರಾಹುಲ್ನ ತಂದೆ ತಾಯಿ ದುಡಿಯಲು ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದಾರೆ.
ಓದು ಬಿಡದ ರಾಹುಲ್:ಈತನ ತಂದೆ ಮೂತಿಲಾಲ್ ರಾಠೋಡ ತಾಯಿ ಸವಿತಾ ದಂಪತಿಗೆ ರಾಹುಲ್ ಸೇರಿ ಮೂವರು ಮಕ್ಕಳು. ಪ್ರಸ್ತುತ ಆತನ ತಂದೆ ತಾಯಿಗಳು ಮಹಾರಾಷ್ಟ್ರದಲ್ಲಿ ತಗಡಿನ ಶೆಡ್‌ನಲ್ಲಿ ವಾಸವಿದ್ದು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವರು. ಬಡತದಲ್ಲಿ ಏನೇ ತೊಂದರೆ ಬಂದರೂ, ರಾಹುಲ್ ಓದು ಮಾತ್ರ ನಿಲ್ಲಿಸಲಿಲ್ಲ. ರಾಹುಲ್ ಸಹ ಕಾಲೇಜಿನ ರಜೆ ಇದ್ದಾಗಲೂ ತಂದೆ-ತಾಯಿ ಜತೆ ಕೂಲಿ ಕೆಲಸ ಮಾಡಲು ಮಹಾರಾಷ್ಟ್ರಕ್ಕೆ ಹೋಗುತ್ತಿದ್ದನು.
ರಾಹುಲ್ ಓದಿನಲ್ಲಿ ಟಾಪರ್: ಓದಿನಲ್ಲಿ ರಾಹುಲ್ ರಾಠೋಡ ಮೊದಲಿನಿಂದಲೂ ಟಾಪರ್ ಆಗಿದ್ದಾನೆ. ಮೂಲತಃ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮನನಾಯಕ್ ತಾಂಡಾದ ನಿವಾಸಿಯಾಗಿದ್ದು, ದುಡಿಯಲು ವಿಜಯಪುರ ಜಿಲ್ಲೆಯಲ್ಲಿ ವಾಸವಿದ್ದರು. ನಂತರ ಕೂಲಿ ಮಾಡಿ ಬಂದ ಹಣ ಸಾಲದಿದ್ದಕ್ಕೆ ಮಹಾರಾಷ್ಟ್ರಕ್ಕೆ ದುಡಿಯಲು ತಂದೆ ತಾಯಿ ಇಬ್ಬರು ಹೆಣ್ಣು ಮಕ್ಕಳು ಹೋಗಿದ್ದರು.
ರಾಹುಲ್ ಮಾತ್ರ ವಿದ್ಯಾಭ್ಯಾಸಕ್ಕಾಗಿ ತಾಳಿಕೋಟೆಯಲ್ಲಿ ವಸತಿ ನಿಲಯದಲ್ಲಿ ವಾಸವಿದ್ದು ಓದಿದ್ದನು. ಸದ್ಯ ಪರೀಕ್ಷೆ ಮುಗಿದ ಮೇಲೆ ಆತನು ಸಹ ಮಹಾರಾಷ್ಟ್ರಕ್ಕೆ ಹೋಗಿದ್ದನು. ಮುಂದೆ ಕಲಾ ವಿಭಾಗದಲ್ಲಿ ಬಿಎ ಎಲ್‌ಎಲ್‌ಬಿ ಮಾಡುವ ಮಹಾದಾಸೆಯನ್ನು ರಾಹುಲ್ ರಾಠೋಡ ಹೊಂದಿದ್ದಾನೆ. ಪಿಯುಸಿಯಲ್ಲಿ ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದಕ್ಕೆ ಅವರ ತಂದೆ, ತಾಯಿ ಮಗನಿಗೆ ಸಿಹಿ ತಿನಿಸಿ ಸಂಭ್ರಮಿಸಿದರು.
ರಾಹುಲ್ ಈಟಿವಿ ಭಾರತದೊಂದಿಗೆ ಮಾತನಾಡಿ, ತಾಳಿಕೋಟೆಯ ಸರ್ಕಾರಿ ವಸತಿ ನಿಲಯದಲ್ಲಿ ಸಮಯ ವ್ಯರ್ಥ ಮಾಡದೇ ಹಚ್ಚು ಕಾಲ ಓದುತ್ತಿದ್ದೆನು. ತಂದೆ ತಾಯಿಗಳು , ಸಹೋದರಿಯರು ಬದುಕು ಸಾಗಿಸಲು ಕೂಲಿ ಮಾಡಿ ಬದುಕುತ್ತಿರುವುದು ಒಂದೊಂದು ಸಲ ನೆನಪಾಗಿ ವೇದನೆ ಆಗುತ್ತಿತ್ತು. ಆದರೂ ನಾನು ಓದಬೇಕು. ಏನಾದರೂ ಸಾಧನೆ ಮಾಡಬೇಕು ಎಂಬ ಮಹಾದಾಸೆ ನನ್ನಲ್ಲಿತ್ತು.
ಆರಂಭದಲ್ಲಿ ಕಾಲೇಜಿಗೆ ಟಾಪರ್ ಬರಬೇಕೆಂಬ ಗುರಿ ಇಟ್ಟುಕೊಂಡು ಓದಿದೆ. ಆದರೆ ಜಿಲ್ಲೆಗೆ ಟಾಪರ್ ಆಗಿರುವುದು ಖುಷಿ ತಂದಿದೆ. ಶಾಲೆಯ ಉಪನ್ಯಾಸಕರಾಗಿದ್ದ ಬಸಮ್ಮ,ಶಿಕ್ಷಣ ಶಾಸ್ತ್ರದ ಮೇಡಂ ಓದಲು ಬೆಂಬಲ ನೀಡಿ ಪ್ರೋತ್ಸಾಹಿಸಿದ್ದರು. ನನ್ನ ಸಾಧನೆಗೆ ತಂದೆ ತಾಯಿ ಖುಷಿಪಡುತ್ತಿರುವುದು ನನಗೆ ಇನ್ನಷ್ಟು ಶಕ್ತಿ ತುಂಬಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.
ದ್ವಿತೀಯ ಪಿಯುಸಿ ಫಲಿತಾಂಶ ವಿಜಯಪುರಕ್ಕೆ ಐದನೇ ಸ್ಥಾನ: ದ್ವೀತಿಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ವಿಜಯಪುರ ಜಿಲ್ಲೆ ಶೇ. 84.69 ರಷ್ಟು ಫಲಿತಾಂಶ ಗಳಿಸುವುದರೊಂದಿಗೆ ರಾಜ್ಯಕ್ಕೆ 5ನೇ ಸ್ಥಾನ ಪಡೆದಿದೆ. ಕಳೆದ 2022ರಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆ ಶೇ.77.14ರಷ್ಟು ಫಲಿತಾಂಶ ಗಳಿಸುವುದರೊಂದಿಗೆ 3ನೇ ಸ್ಥಾನದಲ್ಲಿ ಸಾಧನೆ ಮೆರದಿತ್ತು.
ಇದನ್ನೂಓದಿ: ಕಲಾ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಕುಂದಾನಗರಿಯ ಪ್ರಿಯಾಂಕಾ ಕುಲಕರ್ಣಿ