ಮುದ್ದೇಬಿಹಾಳ: ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಹಾಗೂ ಮೊಹರಂ ಆಚರಣೆಗೆ ಹಲವು ನಿಯಮಗಳನ್ನು ವಿಧಿಸಿ, ಅನುಮತಿ ನೀಡಿದ್ದು, ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಿಪಿಐ ಆನಂದ ವಾಘಮೋಡೆ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಶಾಂತಿ ಪಾಲನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕ ಮೆರವಣಿಗೆ ಮಾಡುವಂತಿಲ್ಲ. ಮೊಹರಂ ಆಚರಣೆಯಲ್ಲೂ ಇವೇ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ತಾಲೂಕಿನಲ್ಲಿ ಹಿಂದೂ, ಮುಸ್ಲಿಂ ಬಾಂಧವರು ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದಾರೆ. ಹಬ್ಬಗಳ ಆಚರಣೆಯ ವೇಳೆ ಮದ್ಯ ಮಾರಾಟ ನಿಷೇಧಿಸಬೇಕು. ಅಲ್ಲದೇ ಗ್ರಾಮೀಣ ಭಾಗದ ಕೆಲ ಪಾನ್ಶಾಪ್ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಅದಕ್ಕೆ ಕಡಿವಾಣ ಹಾಕಬೇಕು ಎಂದು ಅಂಜುಮನ್ ಕಮೀಟಿ ಅಧ್ಯಕ್ಷ ಅಲ್ಲಾಭಕ್ಷಿ ನಾಯ್ಕೋಡಿ ಮನವಿ ಮಾಡಿದರು.
ತಹಶೀಲ್ದಾರ್ ಜಿ.ಎಸ್.ಮಳಗಿ ಮಾತನಾಡಿ, ಸರಳ ರೀತಿಯಿಂದ ಎರಡೂ ಹಬ್ಬಗಳ ಆಚರಣೆ ಮಾಡಬೇಕು. ಸಾರ್ವಜನಿಕವಾಗಿ ಕೂರಿಸುವ ಗಣಪತಿ ಮೂರ್ತಿಗಳು 4 ಅಡಿಗಿಂತ ಹೆಚ್ಚು ಎತ್ತರ ಇರಬಾರದು. ಮೂರ್ತಿ ಪ್ರತಿಷ್ಠಾಪನೆಗಾಗಿ ಅನುಮತಿಯನ್ನು ತ್ವರಿತವಾಗಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು.
ಪಿಎಸ್ಐ ಮಲ್ಲಪ್ಪ ಮಡ್ಡಿ ಮಾತನಾಡಿ, ಆಲಮಟ್ಟಿ ರಸ್ತೆಯ ಕೆಲವು ತಾಂಡಾಗಳಲ್ಲಿ ಗಣಪತಿ ಕೂರಿಸಲು ವಾಹನಗಳನ್ನು ಅಡ್ಡಗಟ್ಟಿ ಚಂದಾ ಸಂಗ್ರಹಿಸುವ ಬಗ್ಗೆ ದೂರುಗಳು ಬಂದಿವೆ. ಈ ರೀತಿಯ ವರ್ತನೆ ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ದೂರು ದಾಖಲಿಸಲಾಗುತ್ತದೆ ಎಂದು ಎಚ್ಚರಿಸಿದರು.
ಪುರಸಭೆ ಸದಸ್ಯ ವೀರೇಶ ಹಡಲಗೇರಿ, ಮುಖಂಡರಾದ ರಾಜಶೇಖರ ಹೊಳಿ, ಪುನೀತ ಹಿಪ್ಪರಗಿ, ಹುಸೇನ್ ಮುಲ್ಲಾ, ಅಗ್ನಿಶಾಮಕ ಠಾಣಾಧಿಕಾರಿ ಪ್ರಮೋದ ಬಿ.ಎಸ್, ಹೆಸ್ಕಾಂ ಜೆಇ ಎಸ್.ಎಸ್. ಪಾಟೀಲ, ಪುರಸಭೆ ಕಂದಾಯಾಧಿಕಾರಿ ಎಂ.ಬಿ. ಮಾಡಗಿ, ಮುಖಂಡರಾದ ಅಶೋಕ ನಾಡಗೌಡ, ಸದ್ದಾಂ ಕುಂಟೋಜಿ, ಪರಶುರಾಮ ನಾಲತವಾಡ, ಸಂದೀಪ ಬಿದರಕೋಟಿ, ಮಹ್ಮದ್ ಇದ್ದರು.