ವಿಜಯಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತೆ ಆಕ್ರೋಶ ಹೊರ ಹಾಕಿದ್ದಾರೆ.
ಟ್ವೀಟರ್, ಫೇಸ್ಬುಕ್ ಪೇಜ್ನಲ್ಲಿ ತಮ್ಮ ಬೆಂಬಲಿಗ ರಾಘವ ಅಣ್ಣಿಗೇರಿ ಮಾಡಿರುವ ಪೋಸ್ಟ್ ಶೇರ್ ಮಾಡಿರುವ ಯತ್ನಾಳ್, ಅಪ್ಪನ ಹೆಸರು ಬಳಸಿಕೊಂಡು ರಾಜ್ಯಭಾರ ಮಾಡುತ್ತಿರುವವರೇ, ಉತ್ತರ ಕರ್ನಾಟಕದವರ ಬಗ್ಗೆ ಹಗುರವಾಗಿ ಮಾತನಾಡಿದರೆ ಜನರು ಕ್ಷಮಿಸುವುದಿಲ್ಲ ಎಚ್ಚರ ಎಂದು ಬರೆದುಕೊಳ್ಳುವುದರ ಮೂಲಕ ಅಸಮಾಧಾನ ಬಹಿರಂಗವಾಗಿ ಹೊರ ಹಾಕಿದ್ದಾರೆ.
ಪತ್ರಿಕೆಯ ವರದಿಯೊಂದನ್ನು ಟ್ಯಾಗ್ ಮಾಡಿ, ವಿಜಯೇಂದ್ರ ಒಬ್ಬನೇ ಎಲ್ಲಾ ಚುನಾವಣೆಗಳನ್ನು ಗೆಲ್ಲಿಸುವುದಾದರೆ, ವಿಜಯೇಂದ್ರ ನೇತೃತ್ವದಲ್ಲಿ ಎರಡೂ ಕ್ಷೇತ್ರ ಗೆಲ್ಲುತ್ತೇವೆ ಎಂದು ಯಡಿಯೂರಪ್ಪ ಹೇಳಿಕೆ ಕುರಿತು ಕಿಡಿಕಾರಿದ್ದಾರೆ. ಹಾಗಾದ್ರೆ ನರೇಂದ್ರ ಮೋದಿಯವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೀ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ, ರಾಜ್ಯ ಪದಾಧಿಕಾರಿಗಳ ಪಾತ್ರವೇನು ಎಂದು ಪ್ರಶ್ನಿಸಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳೇ ಉತ್ತರಿಸುವಿರಾ? ಎಂದು ಮರು ಪ್ರಶ್ನೆ ಮಾಡಿದ್ದಾರೆ. ಹಗಲಿರುಳು ಪಕ್ಷಕ್ಕಾಗಿ ಶ್ರಮಿಸುತ್ತಿರುವ ನಿಷ್ಠಾವಂತ ಕಾರ್ಯಕರ್ತರ ಗತಿಯೇನು? ಪುತ್ರ ವ್ಯಾಮೋಹದ ಹೇಳಿಕೆಗಳನ್ನು ಕೊಡುವುದು ಬಿಟ್ಟ ತಕ್ಷಣ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರವಾಗಿ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಯತ್ನಾಳ್ ಬೆಂಬಲಿಗ ರಾಘವ ಅಣ್ಣಿಗೇರಿಯವರ ಪೋಸ್ಟ್ಅನ್ನು ಯತ್ನಾಳ್ ಶೇರ್ ಮಾಡಿ ಮತ್ತೆ ಟಾಂಗ್ ನೀಡಿದ್ದಾರೆ.