ವಿಜಯಪುರ: ಸಿಂದಗಿ ಉಪಚುನಾವಣೆಗೆ ವೇದಿಕೆ ಸಿದ್ದಗೊಂಡಿದೆ. ಈಗಾಗಲೇ ಜೆಡಿಎಸ್ ಅಭ್ಯರ್ಥಿಯಾಗಿ ನಾಜಿಯಾ ಅಂಗಡಿಯವರನ್ನು ಘೋಷಣೆ ಮಾಡುವ ಮೂಲಕ ಕಾಂಗ್ರೆಸ್ ಮತ ಬ್ಯಾಂಕ್ ಒಡೆಯುವ ಕೆಲಸ ಮಾಡಿದೆ ಎನ್ನಲಾಗುತ್ತಿದೆ. ಇದು ಕಾಂಗ್ರೆಸ್‌ಗೆ ನಷ್ಟವಾಗುವುದರ ಜತೆಗೆ ಬಿಜೆಪಿಗೆ ಲಾಭದ ಮುನ್ಸೂಚನೆ ನೀಡಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಸದ್ಯ ಬಿಜೆಪಿ ಅಭ್ಯರ್ಥಿಯಾಗಿ ರಮೇಶ ಭೂಸನೂರ ಪಕ್ಕಾ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ದಿ.ಎಂ.ಸಿ.ಮನಗೂಳಿ ಪುತ್ರ ಅಶೋಕ ಮನಗೂಳಿ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ನಾಜಿಯಾ ಅಂಗಡಿ ಸ್ಪರ್ಧೆ ಮಾಡುತ್ತಿದ್ದು, ಇವರ ನಡುವೆ ತ್ರಿಕೋನ ಸ್ಪರ್ಧೆ ನಡೆಯುವುದು ಬಹುತೇಕ ಖಚಿತ ಎನ್ನಲಾಗಿದೆ.
ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿ ನಾಜಿಯಾ ಅಂಗಡಿಯವರನ್ನು ಸಿಂದಗಿ ಮತಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಕಾಂಗ್ರೆಸ್‌ನಿಂದ ಅಶೋಕ ಮನಗೂಳಿ ಹೆಸರು ಸಹ ಅಂತಿಮಗೊಂಡಿದ್ದು, ಘೋಷಣೆ ಮಾತ್ರ ಬಾಕಿ ಉಳಿದಿದೆ. ಆಡಳಿತಾರೂಢ ಬಿಜೆಪಿಗೆ ಉಪಚುನಾವಣೆ ಅದರಲ್ಲಿಯೂ ಸಿಎಂ ಬಸವರಾಜ ಬೊಮ್ಮಾಯಿಗೆ ಪ್ರತಿಷ್ಠೆಯ ವಿಚಾರವಾಗಿರುವ ಕಾರಣ ಅಭ್ಯರ್ಥಿ ಆಯ್ಕೆ ಜಟಿಲಗೊಂಡಿದೆ.
ಕಳೆದ ಬಾರಿ ದಿ.ಎಂ.ಸಿ.ಮನಗೂಳಿ ವಿರುದ್ದ 22 ಸಾವಿರಕ್ಕಿಂತ ಹೆಚ್ಚು ಮತದ ಅಂತರದ ಸೋಲು ಕಂಡಿದ್ದ ರಮೇಶ ಭೂಸನೂರ ಅವರಿಗೆ ಟಿಕೇಟ್ ನೀಡಬೇಕಾ? ಇಲ್ಲ ಹೊಸ ಮುಖಕ್ಕೆ ಮಣೆ ಹಾಕಬೇಕಾ? ಎನ್ನುವ ಗೊಂದಲದಲ್ಲಿ ಇನ್ನು ಅಭ್ಯರ್ಥಿ ಘೋಷಣೆ ಮಾಡಲು ಬಿಜೆಪಿ ಹೈಕಮಾಂಡ್ ಹಿಂಜರಿಯುತ್ತಿದೆ. ಇದರ ಮಧ್ಯೆ ಹೊಸ ಅಭ್ಯರ್ಥಿ ಹಾಕಿದರೆ ಅದು ಜೆಡಿಎಸ್ ಇಲ್ಲವೇ ಕಾಂಗ್ರೆಸ್‌ಗೆ ಲಾಭಕ್ಕೆ ದಾರಿ ಮಾಡಿ ಕೊಟ್ಟಂತಾಗುತ್ತದೆ ಎಂದು ಕೂಡಾ ಹೇಳಲಾಗುತ್ತಿದೆ.
ಸಿಂದಗಿ ಮತಕ್ಷೇತ್ರದಲ್ಲಿ ಅಲ್ಪಸಂಖ್ಯಾತ 31 ಸಾವಿರ ಮತಗಳು ಇರುವ ಕಾರಣ ಇವರು ಕಾಂಗ್ರೆಸ್ ಬದಲು ಜೆಡಿಎಸ್ ಬೆಂಬಲಿಸಿದರೆ, ಬಿಜೆಪಿ ನಷ್ಟ ಅನುಭವಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸದ್ಯ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಹೆಸರು ಘೋಷಣೆ ಮಾಡಿದ ಮೇಲೆಯೇ ಉಪಚುನಾವಣೆಯ ಸ್ಪಷ್ಟ ಚಿತ್ರಣ ಲಭಿಸಬಹುದು.