ವಿಜಯಪುರ : ಶಿವಮೊಗ್ಗ ಜಿಲೆಟಿನ್ ಸ್ಫೋಟ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಒತ್ತಾಯಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ರಾಜಕೀಯ ಗಣ್ಯರ ಗಣಿಗಾರಿಕೆಗಳು ಇವೆ. ಹೀಗಾಗಿ ಸ್ಥಳೀಯರು ತನಿಖೆ ನಡೆಸಿದ್ರೆ ಪ್ರಯೋಜನವಾಗುವುದಿಲ್ಲ ಎನ್ನುವ ಮೂಲಕ ಸಿಎಂ ಬಿಎಸ್ವೈಗೆ ಟಾಂಗ್ ನೀಡಿದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐಯಿಂದ ತನಿಖೆ ನಡೆಸಬೇಕು ಎಂದು ಸಲಹೆ ನೀಡಿದರು.
ಗಡಿ ವಿವಾದ ಕುರಿತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನೀಡುತ್ತಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮಹಾ ಸಿಎಂಗೆ ಉಪದ್ಯಾಪಿ ಮಾತನಾಡುವುದು ಬಿಟ್ಟು ಬೇರೆ ಕೆಲಸವಿಲ್ಲ. ಅದಕ್ಕಾಗಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ.
ಹಾಗೆ ನೋಡಿದ್ರೆ ಮಹಾರಾಷ್ಟ್ರದ ಸುತ್ತ ಸೇರಿ ಇನ್ನೂ ಅನೇಕ ಹಳ್ಳಿಗಳು ಕರ್ನಾಟಕಕ್ಕೆ ಸೇರಬೇಕು. ಇದನ್ನು ಅರಿಯದ ಠಾಕ್ರೆ ಹತಾಶರಾಗಿ ಈ ಕೆಲಸ ಮಾಡುತ್ತಿದ್ದಾರೆ. ಇದರಿಂದ ಮತ್ತೆ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಗಲಭೆಕೋರರ ಜತೆ ಗೃಹ ಸ್ನೇಹ : ಬೆಂಗಳೂರಿನಲ್ಲಿ ಯಾರು ಗಲಭೆ ನಡೆಸಿದ್ರೂ ಅಂತವರ ಜತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ನೇಹ ಬೆಳೆಸಿದ್ದಾರೆ. ಅಂತವರನ್ನು ಹದ್ದುಬಸ್ತಿನಲ್ಲಿಡಬೇಕು. ಖದೀಮರು ನಮಗೆ ಗೃಹ ಸಚಿವರು, ಸಿಎಂ ಸ್ನೇಹಿತರಿದ್ದಾರೆ ಎಂದು ಹೇಳಿಕೊಂಡು ತಿರುಗಾಡಿದ್ರೆ ಹೇಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಸ್ವಾಮೀಜಿಗಳು ಮಠಗಳ ಉದ್ಧಾರಕ್ಕೆ ಪ್ರಯತ್ನಿಸಲಿ : ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸಬೇಕು ಅನ್ನೋ ಹೋರಾಟ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ್, ಸ್ವಾಮೀಜಿಗಳಾದವರು ಸಮಾಜಮುಖಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಮಂತ್ರಿ ಮಾಡದಿದ್ದರೆ ಹುಷಾರ್! ಎಂಬಂತಹ ಹೇಳಿಕೆ ನೀಡುವುದು ಸೂಕ್ತವಲ್ಲ. ಅವರು ಮಠಗಳ ಅಭಿವೃದ್ಧಿಗೆ ಶ್ರಮಿಸಲಿ ಎಂದರು.