ಮಂಗಳೂರು: TRAI ಹೆಸರಿನಲ್ಲಿ ಕರೆ ಮಾಡಿ ವ್ಯಕ್ತಿಯೊಬ್ಬರಿಗೆ ಡಿಜಿಟಲ್ ಅರೆಸ್ಟ್ ಮಾಡಿ ಒಂದು ಕೋಟಿ 71 ಲಕ್ಷ ರೂ. ವಂಚಿಸಿದ ಆರೋಪಿಯನ್ನು ಮಂಗಳೂರು ಸಿಇಎನ್ ಕ್ರೈಂ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.
ಕೇರಳದ ಕೋಯಿಕೋಡ್ ಮೂಲದ ಆಕಾಶ್ ಎ. (22) ಬಂಧಿತ ಆರೋಪಿ. ಈ ಪ್ರಕರಣದಲ್ಲಿ, ಅಪರಿಚಿತ ವ್ಯಕ್ತಿಯು TRAIನಿಂದ ಪ್ರತಿನಿಧಿಸಿ ಕರೆ ಮಾಡುವುದಾಗಿ ಪರಿಚಯಿಸಿಕೊಂಡಿದ್ದ. ಆ ಬಳಿಕ ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್ ನಂಬರ್ ರಿಜಿಸ್ಟರ್ ಆಗಿದ್ದು, ಮುಂಬೈನ ಅಂಧೇರಿ(E)ಯಲ್ಲಿ ಹಲವು ಕಾನೂನುಬಾಹಿರ ಚಟುವಟಿಕೆಗೆ ಬಳಸಲಾಗಿದೆ. ಮಾರ್ಕೆಟಿಂಗ್ ನೆಪದಲ್ಲಿ ನಿಮಗೆ ಸಂಬಂಧಿಸಿದ ಮೊಬೈಲ್ ನಂಬರ್ನಿಂದ ಕರೆ ಮಾಡಿ ಕಿರುಕುಳ ಕೊಡುತ್ತಿರುವ ಬಗ್ಗೆ ಎಫ್ಐಆರ್ ದಾಖಲಾಗಿದೆ ಎಂದು ಹೆದರಿಸಿರುವ ಬಗ್ಗೆ ದೂರು ದಾಖಲಾಗಿತ್ತು.
ಅಲ್ಲದೇ, ಕೂಡಲೇ ಅಂಧೇರಿ(E) ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು, ಇಲ್ಲದಿದ್ದಲ್ಲಿ ನಿಮ್ಮ ಮೊಬೈಲ್ ನಂಬರ್ ಸೇವೆಯನ್ನು 2 ಗಂಟೆಗಳಲ್ಲಿ ಕೊನೆಗೊಳಿಸಲಾಗುವುದು ಎಂಬುದಾಗಿ ಬೆದರಿಸಿದ್ದ. ಜೊತೆಗೆ, ಅಂಧೇರಿಯ ಕೆನರಾ ಬ್ಯಾಂಕ್ನಲ್ಲಿ ನಿಮ್ಮ ಹೆಸರಿನಲ್ಲಿ ಖಾತೆ ತೆರೆದು ವಂಚನೆಗೆ ಬಳಸಲಾಗಿದೆ. ಇದಕ್ಕೆ ಐಡೆಂಟಿಟಿ ಬಳಸಿ ಸಿಮ್ ಖರೀದಿಸಲಾಗಿದ್ದು, ಹಾಗಾಗಿ ನಿಮ್ಮನ್ನು ಬಂಧಿಸಲಾಗುವುದು ಎಂದು ತಿಳಿಸಿ, ಡಿಜಿಟಲ್ ಆರೆಸ್ಟ್ ಮಾಡುವುದಾಗಿ ನಂಬಿಸಿದ್ದಾನೆ. ಆ ಬಳಿಕ ಹಂತ, ಹಂತವಾಗಿ ಒಟ್ಟು 1 ಕೋಟಿ 71 ಲಕ್ಷ ರೂ. ಹಣವನ್ನು ಪಡೆದು ವಂಚನೆ ಮಾಡಲಾಗಿದೆ ಎಂದು ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಆಕಾಶ್ ಎಂಬಾತನನ್ನು ಕೇರಳಕ್ಕೆ ತೆರಳಿ ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶದ ಆಮಿಷವೊಡ್ಡಿ ವಂಚನೆ: ಪ್ರತ್ಯೇಕ ಪ್ರಕರಣದಲ್ಲಿ, ಅಧಿಕ ಲಾಭಾಂಶದ ಆಮಿಷವೊಡ್ಡಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿಸಿ 10.84 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣದಲ್ಲಿ ಮಂಗಳೂರು ಸಿಇಎನ್ ಠಾಣೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಕೇರಳದ ಪಾಲಕ್ಕಾಡ್‌ನ ಮಲಪ್ಪುರಂ ಪುಲಪಟ್ಟ ಪರಕ್ಕಾಡ್‌ನ ಜಾಫರ್ ಕೆ. (49) ಬಂಧಿತ ಆರೋಪಿ.
ಅಪಚಿರಿತ ವ್ಯಕ್ತಿಗೆ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂಬುದಾಗಿ ನಂಬಿಸಿ ಮೋಸ ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು. ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸುವ ಬಗ್ಗೆ ಸ್ಟೋಕ್ ಫ್ರಂಟ್ ಲೈನ್ ಎಂಬ ಲಿಂಕ್ ಅನ್ನು ವಾಟ್ಸ್ಆ್ಯಪ್‌ಗೆ ಕಳುಹಿಸಿದ್ದರು. ಅದರಂತೆ ಈ ವ್ಯಕ್ತಿ ಕಡೆಯಿಂದ ಹಂತ, ಹಂತವಾಗಿ 10,84,017 ರೂ. ಹಣ ಕಟ್ಟಿಸಿಕೊಂಡು ವಂಚನೆ ಮಾಡಿರುವ ಬಗ್ಗೆ ಹಣ ಕಳೆದುಕೊಂಡವರು ದೂರು ನೀಡಿದ್ದರು.
ಇದನ್ನೂ ಓದಿ: ಒಂದು ತಿಂಗಳು ಡಿಜಿಟಲ್ ಅರೆಸ್ಟ್: ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿಗೆ 11.83 ಕೋಟಿ ರೂ. ವಂಚನೆ
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ದೂರುದಾರರಿಂದ ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆದಾರರ ವಿವರಗಳನ್ನು ಸಂಗ್ರಹಿಸಿ ಪರಿಶೀಲಿಸಿದಾಗ ಆರೋಪಿಯು ಕೇರಳ ಮೂಲದ ಜಾಫರ್ ಎಂದು ತಿಳಿದು ಬಂದಿದೆ. ಬಳಿಕ ಕೇರಳಕ್ಕೆ ತೆರಳಿದ ಸಿಇಎನ್ ಠಾಣೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನುಳಿದ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 11 ತಿಂಗಳಲ್ಲಿ 641 ಪ್ರಕರಣ; ಏನಿದು ಡಿಜಿಟಲ್ ಅರೆಸ್ಟ್, ಜನ ವಹಿಸಬೇಕಿರುವ ಎಚ್ಚರಿಕೆಗಳೇನು?