ವಿಜಯಪುರ: ಸ್ಯಾನಿಟೈಸರ್ ಬಾಟಲ್ ಮುಟ್ಟಿ ಜನ ಕೈ ತೊಳೆಯುತ್ತಿರುವ ಕಾರಣ ಕೊರೊನಾ ಹರಡಬಹುದು ಎಂದು ಮನಗಂಡ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಸೆನ್ಸಾರ್ ಸ್ಯಾನಿಟೈಸರ್ ಸಿಂಪಡನೆ ಯಂತ್ರವನ್ನ ಸಂಶೋಧನೆ ಮಾಡಿದ್ದಾನೆ.
ಗುಮ್ಮಟ ನಗರಿಯ ಅಭಿಷೇಕ್ ಹಿಪ್ಪರಗಿ ಎಂಬ ಯುವಕ ಈ ಯಂತ್ರವನ್ನು ಸಂಶೋಧನೆ ಮಾಡಿದ್ದಾನೆ. ಸ್ಥಳೀಯವಾಗಿ ಸಿಗುವ ವಸ್ತುಗಳನ್ನ ಬಳಕೆ ಮಾಡಿಕೊಂಡು ಅಟೋಮ್ಯಾಟಿಕ್ ಸ್ಯಾನಿಟೈಸರ್ ಯಂತ್ರ ಸಂಶೋಧನೆ ಮಾಡಿದ್ದಾನೆ. ಈ ವಿದ್ಯಾರ್ಥಿ ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದು, ಕೇವಲ 1 ಸಾವಿರ ರೂ. ವೆಚ್ಚದಲ್ಲಿ ಈ ಮಷಿನ್ ಕಂಡು ಹಿಡಿದಿದ್ದಾನೆ. ಕೊರೊನಾ ತುರ್ತು ಸಮಯದಲ್ಲಿ ಸಮಾಜಕ್ಕೆ ನನ್ನಿಂದ ಏನಾದ್ರೂ ಸಹಾಯವಾಗಲಿ ಅಂತಾ ಯಂತ್ರ ತಯಾರಿಸಿದ್ದೇನೆ ಎಂದು ಅಭಿಷೇಕ್ ಹೇಳಿದ್ದಾನೆ.
ಯಂತ್ರವನ್ನು ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಬಳಕೆ ಮಾಡುವುರಿಂದ ಕೊರೊನಾ ವೈರಸ್ ತಡೆಯಬಹುದು. ಮನೆಯಲ್ಲಿ ಬಳಕೆ ಮಾಡುವ ಡಬ್ಬ, ಐಆರ್ಎಲ್ಇಡಿ, ಐಸಿಎಲ್‌ಎಂ35 ಹಾಗೂ ಡಿಸಿ ಪಂಪ್ ಬಳಕೆ ಮಾಡಿಕೊಂಡು ಅಭಿಷೇಕ್ ಈ ಸೆನ್ಸಾರ್ ಚಾಲಿತ ಸ್ಯಾನಿಟೈಸರ್ ಮಷಿನ್ ತಯಾರಿಸಿದ್ದಾನೆ.