ವಿಜಯಪುರ: ಮೂರ್ನಾಲ್ಕು ದಿನಗಳಿಂದ ವರುಣನ ಆರ್ಭಟಕ್ಕೆ ತರಕಾರಿ ಬೆಳೆಗಳು ಮಳೆಗೆ ನಾಶವಾದ ಪರಿಣಾಮ ತರಕಾರಿ ಬೆಲೆಗಳಲ್ಲಿ ಏರಿಕೆ ಉಂಟಾಗಿದೆ.
ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಆಮದು ಕುಂಠಿತಗೊಂಡ ಕಾರಣ ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಮಾಡುವ ಮೊದಲು ನಗರದ ನಿವಾಸಿಗಳು ಒಂದು ಬಾರಿ ಯೋಚನೆ ಮಾಡುವಂತಾಗಿದೆ. ಕಳೆದ ವಾರ ಈರುಳ್ಳಿ ಕೆ.ಜಿಗೆ 40 ರೂ.ಗೆ ಮಾರಾಟವಾಗುತ್ತಿತ್ತು. ಆದ್ರೆ ಇಂದು ಬೆಳಗ್ಗಿನಿಂದ 70 ರೂ. ತಲುಪಿದೆ. ಬದನೆಕಾಯಿ, ಸೌತೆಕಾಯಿ, ಬೆಂಡೆಕಾಯಿ ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಕೆ.ಜಿ. ಗೆ 50 ರೂ. 60 ರೂ. ವರೆಗೆ ಮಾರಾಟವಾಗುತ್ತಿತ್ತು. ಆದ್ರೆ ಇಂದು 80 ರೂ. ತಲುಪಿದೆ. ಇನ್ನು ಕೊತ್ತಂಬರಿ, ಸಬಸಗಿ ಹಾಗು ರಾಜಗೀರಿ ಮಳೆಗೆ ತುತ್ತಾದ ಪರಿಣಾಮ ಇರುವ ತರಕಾರಿಗಳನ್ನೇ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆ ಉಂಟಾಗಿದೆ ಅಂತಾರೆ ತರಕಾರಿ ವ್ಯಾಪಾರಿಗಳು.ಇನ್ನು ಕೆಲದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವುದಕ್ಕೆ ರೈತರು ಎಪಿಎಂಸಿ ಮಾರುಕಟ್ಟೆಗೆ ತರಕಾರಿ ಮಾರಾಟ ಮಾಡಲು ಬಾರದ ಹಿನ್ನೆಲೆಯಲ್ಲಿ ತರಕಾರಿ ಬೆಲೆ ಏರಿಕೆಯಾಗಿದೆ. ಭಾರೀ ಮಳೆ ಅನಾಹುತದ ನಡುವೆ ಸಾರ್ವಜನಿಕರಿಗೆ ತರಕಾರಿ ಬೆಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ.