ಮುದ್ದೇಬಿಹಾಳ: ಕೆಆರ್‌ಡಿಸಿಎಲ್ ನಿರ್ಮಿಸಿರುವ ಪಟ್ಟಣದ ಮೂಲಕ ಹಾಯ್ದು ಹೋಗುವ ಹುನಗುಂದ-ತಾಳಿಕೋಟೆ ಹೆದ್ದಾರಿಯ ಮಧ್ಯೆ ಇರುವ (ಡಿವೈಡರ್) ವಿಭಜಕ ಹಾಗೂ ಹೆದ್ದಾರಿಯ ಇಕ್ಕೆಲೆಗಳಲ್ಲಿ ಗಿಡಗಳನ್ನು ನೆಡುವಂತೆ ಕೋರಿ ಹಸಿರು ತೋರಣ ಗೆಳೆಯರ ಬಳಗದ ಸದಸ್ಯರು ಶುಕ್ರವಾರ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಗಿಡ ನೆಡುವ ಬಗ್ಗೆ ಬೆಳಕು ಚೆಲ್ಲಿದ್ದ ಈಟಿವಿ ಭಾರತ:
ಪಟ್ಟಣದ ಮೂಲಕ ಹಾಯ್ದು ಹೋಗಿರುವ ರಾಜ್ಯ ಹೆದ್ದಾರಿ ಮಧ್ಯೆಯ ವಿಭಜಕದಲ್ಲಿ ಸಸಿ ನೆಡುವುದು ಹಾಗೂ ವಿದ್ಯುತ್ ಬೀದಿ ದೀಪ ಅಳವಡಿಸುವ ಬಗ್ಗೆ ಈಟಿವಿ ಭಾರತ ಕಳೆದ ಜೂ.4 ರಂದೇ ವರದಿ ಬಿತ್ತರಿಸಿ ಸಾರ್ವಜನಿಕರ ಗಮನ ಸೆಳೆದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಈ ವೇಳೆ ಮಾತನಾಡಿದ ಸಂಚಾಲಕ ಮಹಾಬಲೇಶ್ವರ ಗಡೇದ, ಹೆದ್ದಾರಿ ಇಕ್ಕೆಲೆಗಳಲ್ಲಿ ಡಬ್ಬಿ ಅಂಗಡಿಗಳು ತಲೆ ಎತ್ತುತ್ತಿವೆ. ಅವುಗಳ ಸ್ಥಳದಲ್ಲಿ ಗಿಡಗಳನ್ನು ನೆಡುವಂತಾಗಬೇಕು. ಈಗಾಗಲೇ ಹೆದ್ದಾರಿ ನಿರ್ಮಾಣ ಕಾರ್ಯ ಮುಗಿದಿದೆ. ಪಟ್ಟಣದ ಆಶ್ರಯ ಕಾಲೋನಿಯಿಂದ ಪಟ್ಟಣದ ತಂಗಡಗಿ ರಸ್ತೆಯ ಕೊನೆಯಲ್ಲಿ ಬರುವ ಹಡಲಗೇರಿ ರಸ್ತೆಯ ಕ್ರಾಸ್ ವರೆಗೆ ರಸ್ತೆ ಇದ್ದು ಇಲ್ಲಿ ಗಿಡಗಳನ್ನು ನೆಡಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಮಾತನಾಡಿ, ಡಿವೈಡರ್‌ನಲ್ಲಿ ಈಗಾಗಲೇ ವಿದ್ಯುತ್ ಕಂಬಗಳನ್ನು ಜೋಡಿಸುವ ಕೆಲಸ ಪ್ರಗತಿಯಲ್ಲಿದೆ. ಇದು ಪೂರ್ಣಗೊಂಡ ಕೂಡಲೇ ಗಿಡಗಳನ್ನು ನೆಡುವ ಕೆಲಸ ನಡೆಯಲಿದೆ. ಶಾಸಕ ನಡಹಳ್ಳಿ ಅವರು ಸಹ ಇದಕ್ಕೆ ಮೊದಲ ಆದ್ಯತೆ ನೀಡಿದ್ದಾರೆ ಎಂದರು.
ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಬಳಗದ ಮಾಜಿ ಅಧ್ಯಕ್ಷ ಕೆ.ಆರ್.ಕಾಮಟೆ, ವಕೀಲರಾದ ನಾಗಭೂಷಣ ನಾವದಗಿ, ಬಿ.ಎಂ. ಪಲ್ಲೇದ, ಅಮರೇಶ ಗೂಳಿ, ಡಾ.ವೀರೇಶ ಇಟಗಿ, ಸುರೇಶ ಕಲಾಲ ಮತ್ತಿತರರು ಇದ್ದರು.