ವಿಜಯಪುರ : ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಿಂದ(unseasonal rain) ವಿವಿಧ ಬೆಳೆಗಳು ನಾಶವಾಗುತ್ತಿದ್ದರೆ, ವಿಜಯಪುರ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬಿತ್ತನೆ ಮಾಡಿದ್ದ ತೊಗರಿ ಬೆಳೆ(Bark crop) ಹೂ ಬಿಡದೇ ಬಾಡಿ ಹೋಗುತ್ತಿದೆ.
ಅತಿ ಸುಲಭವಾಗಿ ಬೆಳೆಯುವ ತೊಗರಿ ಬೆಳೆಯನ್ನು ಕಳೆದ ಕೆಲ ವರ್ಷಗಳಿಂದ ರೈತರು ಹೆಚ್ಚೆಚ್ಚು ಬೆಳೆಯುತ್ತಿದ್ದಾರೆ. ಪ್ರತಿ ವರ್ಷ ಲಾಭವನ್ನೂ ಸಹ ಗಳಿಸಿದ್ದಾರೆ. ಆದರೆ, ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದ ಕಾರಣ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ ರೈತರು.
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 4.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ಆದರೆ, ಸರಿಯಾದ ಸಮಯಕ್ಕೆ ಮಳೆ ಬರದೇ ಇರುವ ಕಾರಣ ಇಂದು ತೊಗರಿ ಹಾಳಾಗಿದೆ. ಬೆಳೆಗಾರರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.
ವಿಜಯಪುರ ಜಿಲ್ಲೆಯು ಶಾಶ್ವತ ಬರ ಪೀಡಿತ ಜಿಲ್ಲೆ ಎಂದೇ ಕರೆಸಿಕೊಂಡಿದೆ. ಈ ಜಿಲ್ಲೆಯ ರೈತರು ಕೆಲವೊಮ್ಮೆ ಅತಿವೃಷ್ಠಿಯಿಂದಾಗಿ ಬೆಳೆಗಳು ಹಾಳಾದರೆ ಮತ್ತೊಮ್ಮೆ ಅನಾವೃಷ್ಠಿಯಿಂದ ಹಾಳಾಗುತ್ತವೆ.
ಅಕ್ಟೋಬರ್ ತಿಂಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆ ಭೂಮಿಗೆ ಹಸಿ ಪ್ರಮಾಣ ಕಡಿಮೆಯಾಗಿದೆ. ಇದರಿಂದಾಗಿ ರೈತರು ಬೆಳೆದ ತೊಗರಿ ಹಾಳಾಗಿದೆ.
ಜೂನ್, ಜುಲೈ, ಆಗಸ್ಟ್ ಹಾಗೂ ಸೆಪ್ಟಂಬರ್ನಲ್ಲಿ ವಾಡಿಕೆಯಷ್ಟು ಉತ್ತಮ ಮಳೆಯಾಗಿದೆ. ಆದರೆ, ಅಕ್ಟೋಬರ್ನಲ್ಲಿ 111 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ, ಆಗಿದ್ದು 32 ಮಿ.ಮೀ ಮಾತ್ರ. ಹೀಗಾಗಿ, ಮಳೆ ಬಹಳಷ್ಟು ಕಡಿಮೆಯಾಗಿದೆ.
ನವೆಂಬರ್ನಲ್ಲಿ 25 ಮಿ.ಮೀ ಮಳೆಯಾಗಿಬೇಕಿತ್ತು. ಆದರೆ, ಆಗಿದ್ದು 12 ಮಿ.ಮೀ ಮಾತ್ರ. ಮುಖ್ಯವಾಗಿ ಅಕ್ಟೋಬರ್ನಲ್ಲಿ ಅಗತ್ಯಕ್ಕೆ ತಕ್ಕಂತೆ ಮಳೆಯಾಗಬೇಕಿತ್ತು. ಆದರೆ, ಮಳೆ ಆಗದ ಕಾರಣ ಇಂದು ಭೂಮಿಗೆ ಹಸಿಯ ಕೊರತೆ ಉಂಟಾಗಿ ತೊಗರಿ ಬೆಳೆ ಹಾಳಾಗಿದೆ.
ಇದನ್ನೂ ಓದಿ:ನಿರಂತರ ಮಳೆ ಅವಾಂತರ.. ಅನ್ನದಾತನ ಕೈಸೇರದ ಬೆಳೆ, ಗ್ರಾಹಕರಿಗೆ ಎಟುಕದ ತರಕಾರಿ ಬೆಲೆ..