ವಿಜಯಪುರ: ಆಯುಷ್ಯ ಆರೋಗ್ಯ ಭಾಗ್ಯ ಯೋಜನೆಯು ದೇಶದ ಜನರಿಗೆ ಅತ್ಯುತ್ತಮ ಆರೋಗ್ಯ ಯೋಜನೆಯಾಗಿದ್ದು, ಎಲ್ಲ ವರ್ಗದ ಜನ ಸಾಮಾನ್ಯರಿಗೆ ತಲುಪಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸುರೇಶಗೌಡ ಬಿರಾದಾರ ಹೇಳಿದರು.
ತಾಲೂಕಿನ ತೊರವಿ ಜಾನುವಾರು ಜಾತ್ರೆಯಲ್ಲಿ ವಾರ್ತಾ ಇಲಾಖೆಯಿಂದ ಪ್ರೇರಣಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ನಡೆಸಿಕೊಟ್ಟ ಬೀದಿ ನಾಟಕ ಕಾರ್ಯಕ್ರಮವನ್ನು ಡೋಲು ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಕೃಷಿ ಸಮ್ಮಾನ ನಿಧಿ ಯೋಜನೆಯಡಿ ರೈತರ ಖಾತೆಗೆ ವರ್ಷಕ್ಕೆ 6 ಸಾವಿರ ಮತ್ತು ರಾಜ್ಯ ಸರ್ಕಾರದಿಂದ 4 ಸಾವಿರ ಒಟ್ಟು 10 ಸಾವಿರ ರೂ ಸಹಾಯಧನ ನೀಡಲಾಗುತ್ತಿದೆ. ರೈತ ಸಿರಿಯೊಜನೆಯಡಿ ಸಿರಿಧಾನ್ಯ ಬೆಳೆದ ರೈತರಿಗೆ 1 ಹೆಕ್ಟೇರ್ಗೆ 10 ಸಾವಿರ ರೂ ಪ್ರೋತ್ಸಾಹ ಧನ, ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿಗೆ ಧನ ಸಹಾಯ, ಕೃಷಿ ಭಾಗ್ಯ ಯೋಜನೆಯಡಿ ಕೃಷಿಹೊಂಡ ಹಾಗೂ ಘಟಕಕ್ಕೆ ಧನ ಸಹಾಯ ನೀಡಲಾಗುತ್ತಿದೆ. ಸರ್ಕಾರದ ಈ ಎಲ್ಲ ಯೋಜನೆಗಳು ರೈತರಿಗೆ ತಲುಪುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕಿದೆ. ರೈತರು ಈ ಯೋಜನೆಗಳ ಲಾಭ ಪಡೆದು ಕೃಷಿಯಲ್ಲಿ ಮತ್ತಷ್ಟು ಹೆಚ್ಚಿನ ಆಸಕ್ತಿವಹಿಸಲು ಮುಂದಾಗಬೇಕು. ಅಲ್ಲದೇ ಕೃಷಿ ಯಂತ್ರಧಾರೆ ಯೋಜನೆಯಡಿ ಕೃಷಿ ಚಟುವಟಿಕೆಗೆ ಬೇಕಾದ ಆಧುನಿಕ ಸಾಮಗ್ರಿಗಳು ಕೈಗೆಟಕುವ ದರದಲ್ಲಿ ಸಿಗುತ್ತಿವೆ. ಕೃಷಿ ಅಧಿಕಾರಿಗಳನ್ನ ಭೇಟಿ ಮಾಡಿ ಕೃಷಿಗೆ ಸಂಬಂಧಿಸಿದ ಸವಲತ್ತುಗಳನ್ನು ಪಡೆಯಬೇಕು ಎಂದು ಅವರು ಹೇಳಿದರು.
ಪ್ರೇರಣಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಲಾವಿದರು ಆಯುಷ್ಮಾನ್ ಆರೋಗ್ಯ ಭಾಗ್ಯ ಕುರಿತು ’’ನೇಗಿಲ ಯೋಗಿ’’ ಬೀದಿನಾಟಕ ಪ್ರದರ್ಶನ ಮಾಡಿ ನೆರೆದ ಜನರಿಗೆ ಮನ ಮುಟ್ಟುವಂತೆ ಕಾರ್ಯಕ್ರಮ ನೀಡಿದರು. ಇದರೊಂದಿಗೆ ಸರ್ಕಾರದ ಜನಪರ ಯೋಜನೆಗಳಾದ ಕೃಷಿ ಸಮ್ಮಾನ ಯೋಜನೆ, ನೇಕಾರರ ಸಾಲಮನ್ನಾ, ಮೀನುಗಾರರ ಸಾಲ ಮನ್ನಾ ಹಾಗೂ ಕೃಷಿ ಭಾಗ್ಯ ಕುರಿತು ಬೀದಿನಾಟಕ ಪ್ರದರ್ಶಿಸಿ ಜನರ ಮೆಚ್ಚುಗೆ ಪಡೆಯಿತು. ಶಿರಬೂರದ ಸರಸ್ವತಿ ಗಾಯನ ಸಂಘದ ಕಲಾವಿದರು ಜನಪದ ಸಂಗೀತದ ಮೂಲಕ ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿದರು.
ವಾರ್ತಾ ಇಲಾಖೆಯು ಗ್ರಾಮೀಣ ಪ್ರದೇಶದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ನೀಡಲು ಕರಪತ್ರ, ಜನಪದ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಾತೃಪೂರ್ಣ ಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ ಹಾಗೂ ಮಕ್ಕಳ ಆರೋಗ್ಯ ಕುರಿತು ಹಲವಾರು ಯೋಜನೆಗಳನ್ನು ಜನಪದ ಸಂಗೀತ ರೂಪದಲ್ಲಿ ಕೂಡ ಜನರಿಗೆ ಮಾಹಿತಿಯನ್ನು ಒದಗಿಸುತ್ತಿದೆ. ಸರ್ಕಾರದ 100 ದಿನ ಸಾಧನೆ ಕುರಿತು ಕಿರು ಹೊತ್ತಿಗೆಯನ್ನು ಕೂಡ ಈ ಸಂದರ್ಭದಲ್ಲಿ ಜನರಿಗೆ ತಲುಪಿಸಲಾಯಿತು.