ವಿಜಯಪುರ: ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 54 ಮಹನೀಯರಿಗೆ ಪಂಚಮಸಾಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜ್ಯೋತಿ ಬೆಳಗಿಸಿ, ರಾಣಿ ಚನ್ನಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾಜಕೀಯ, ಕಲೆ, ಸಮಾಜ ಸೇವೆ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪಂಚಮಸಾಲಿ ಪ್ರಶಸ್ತಿ ನೀಡಲಾಯಿತು.
ನಗರದ ಸಿದ್ದೇಶ್ವರ ಕಲಾ ಭವನದಲ್ಲಿ ಚೆನ್ನಮ್ಮ ವಿದ್ಯಾವರ್ಧಕ ಸಂಸ್ಥೆಯಿಂದ ರಾಷ್ಟ್ರ, ರಾಜ್ಯ, ರಾಷ್ಟ್ರ ಮಟ್ಟದ ಹಾಗೂ ಜೀವನಮಾನದ ಸಾಧನೆಯ ಪಂಚಮಸಾಲಿ ಪ್ರಶಸ್ತಿಗಳನ್ನು, ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ಪ್ರದಾನ ಮಾಡಿದರು. ಚನ್ನಮ್ಮ ಜಯಂತಿ ನಿಮಿತ್ತ ಕೊಡ ಮಾಡುವ ಈ ಪುರಸ್ಕಾರ ಜೀವಮಾನ ಸಾಧನೆಗಾಗಿ ಪಂಚಮಸಾಲಿ ಕಿರೀಟ ಎಂಬ ಪ್ರಶಸ್ತಿಯನ್ನು ಶಂಕರಗೌಡ ಪಾಟೀಲ, ರಾಷ್ಟ ಮಟ್ಟದ ಪ್ರಶಸ್ತಿಗೆ ಪತ್ರಕರ್ತ ಶಶಿಕಾಂತ ಮೇಡೆಗಾರ ಹಾಗೂ ಜಿ.ಎಸ್. ಕಮತರ ಪಡೆದುಕೊಂಡರೆ, ಜಿಲ್ಲಾ ಮಟ್ಟದ ಪ್ರಶಸ್ತಿ ಖಾಸಗಿ ಸುದ್ದಿವಾಹಿನಿಯ ಕ್ಯಾಮರಾಮ್ಯಾನ್ ಸುನೀಲ ಗೋಡೆನವರ್, ರಾಜ್ಯ ಮಟ್ಟದ ಪಂಚಮಸಾಲಿ ಪ್ರಶಸ್ತಿ, ವಿಜುಗೌಡ ಪಾಟೀಲ ರಾಜಕೀಯ ಕ್ಷೇತ್ರಕ್ಕೆ, ರೇವಣಸಿದ್ದ ಐಗಳಿ ರಂಗಭೂಮಿಗೆ, ಹರ್ಷ ಪಾಟೀಲ ಸಹಕಾರ ಕ್ಷೇತ್ರದ ಪ್ರಶಸ್ತಿಗೆ ಭಾಜನರಾದರು. ಇವರುಗಳ ಜೊತೆ ಇನ್ನೂ ಹಲವು ಗಣ್ಯರಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಜೀವಮಾನ ಸಾಧನೆಯ ಪಂಚಮಸಾಲಿ ಹುಲಿ ಪ್ರಶಸ್ತಿಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭಾಜನರಾಗಿದ್ದರು. ಆದರೆ ಕಾರ್ಯಕ್ರಮಕ್ಕೆ ಶಾಸಕ ಯತ್ನಾಳ ಅನುಪಸ್ಥಿತರಿದ್ದರು.