ವಿಜಯಪುರ: ಶಾಲೆ ಆರಂಭಿಸಬಾರದು ಎಂದು ಸರ್ಕಾರದ ಕಟ್ಟುನಿಟ್ಟಿನ ಸೂಚನೆ ಇದೆ. ಆದ್ರೂ ಸಹ ನಗರದ ರಹೀಂ ನಗರದ ರೋಜ್ ಲೈನ್ ನರ್ಸರಿ ಶಾಲೆ ಆರಂಭಿಸಿ ಮಕ್ಕಳ ಜೀವದ ಜತೆ ಚೆಲ್ಲಾಟವಾಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಕೊರೊನಾ ವೈರಸ್ ಕಾಲಿಡುತ್ತಿದ್ದಂತೆ ಮಕ್ಕಳ ಜೀವಕ್ಕೆ ಯಾವುದೇ ತೊಂದರೆಯಾಗಬಾರದು ಎಂದು ರಾಜ್ಯ ಸರ್ಕಾರ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯನ್ನೆ ಮುಂದೂಡಿದೆ. ಇದರ ಜತೆ ಎಲ್ಲ ಶಾಲೆ ಆರಂಭಿಸದಂತೆ ಸೂಚನೆ ನೀಡಿದೆ. ಈ ಆದೇಶ ಜಾರಿಯಾಗಿ ಎರಡು ತಿಂಗಳು ಕಳೆದಿವೆ. ಎಲ್ಲ ಸರಿಯಾಗಿದ್ದರೆ ಈಗ ಶಾಲೆ ಆರಂಭಗೊಳ್ಳಬೇಕಿತ್ತು. ಆದರೆ, ಸರ್ಕಾರ ಇನ್ನೂ ಶಾಲೆ ಆರಂಭ ಮಾಡಲು ಹಿಂದೇಟು ಹಾಕುತ್ತಿರುವಾಗಲೇ ರಹೀಂ ನಗರದ ರೋಜ್ ಲೈನ್ ನರ್ಸರಿ ಶಾಲೆ ಆರಂಭಿಸಿ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದರ ಮಧ್ಯೆ ಶಾಲೆಗೆ ಮಕ್ಕಳು ಹೋಗುವ ವಿಡಿಯೋ ಸಹ ವೈರಲ್ ಆಗಿದೆ. ಈ ಹಿನ್ನೆಲೆ ನಗರ ಬಿಇಒ ಶರೀಫ್ ನದಾಫ್ ನರ್ಸರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ನಾನು ಯಾವುದೇ ಶಾಲೆ ಆರಂಭಿಸಿಲ್ಲ ಎಂದು ಶಾಲಾ ಮುಖ್ಯಸ್ಥೆ ಸ್ಪಷ್ಟಪಡಿಸಿದ್ದಾರೆ.