ವಿಜಯಪುರ: ಭೂಮಿಯ ಆಳದಿಂದ ವಿಚಿತ್ರವಾಗಿ ಶಬ್ದ ಕೇಳಿ ಬರುತ್ತಿರುವ ಬಬಲೇಶ್ವರ ತಾಲೂಕಿನ ಅಡವಿ ಸಂಗಾಪೂರ ಗ್ರಾಮಕ್ಕೆ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ವಾರದಿಂದ ರಾತ್ರಿಯ ಸಮಯದಲ್ಲಿ ಭೂಮಿಯಿಂದ ಸ್ಫೋಟಕ ರೀತಿಯಲ್ಲಿ ಶಬ್ದ ಕೇಳಿ ಬರುತ್ತಿರುವ ಬೆನ್ನಲ್ಲೇ, ಗ್ರಾಮಸ್ಥರು ಭೂಕಂಪನವಾಗುತ್ತಿದೆ ಎಂದು ಆತಂಕಗೊಂಡಿದ್ದಾರೆ. ರಾತ್ರಿಯಾದರೆ ಸಂಗಾಪೂರ ಗ್ರಾಮದ ಜನರು ಮನೆಯಲ್ಲಿ ಇರಲು ಆತಂಕಪಡುತ್ತಿರುವುದಕ್ಕೆ ಗ್ರಾಮಕ್ಕೆ ತೆರಳಿದ ಎಸಿ ಬಲರಾಮ ಲಮಾಣಿ ಮನೆ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಗ್ರಾಮಸ್ಥರಿಂದ ಭೂ ಆಳದಿಂದ ಕೇಳಿ ಬರುತ್ತಿರುವ ಶಬ್ದ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನು ಜನರು ಯಾವುದೇ ಆತಂಕಕ್ಕೆ ಒಳಗಾಗಬಾರದು. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸುವುದಾಗಿ ಅಡವಿ ಸಂಗಾಪುರ ಗ್ರಾಮಸ್ಥರಿಗೆ ಬಲರಾಮ್ ಭರವಸೆ ನೀಡಿದರು.
ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಕಳೆದ ಹದಿನೈದು ದಿನಗಳ ಹಿಂದೆ ಜಿಲ್ಲೆ ಮಸೂತಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಮಿ ಆಳದಿಂದ ಶಬ್ದ ಕೇಳಿ ಬಂದಿತ್ತು. ಆದ್ರೆ, ಅಲ್ಲಿ ಭೂಕಂಪದ ಕುರಿತು ರಿಕ್ಟರ್ ಮಾಪಕದಲ್ಲಿ ದಾಖಲಾಗಿಲ್ಲ. ಈ ಗ್ರಾಮದಲ್ಲಿ ಕಳೆದ ವಾರದಿಂದ ಭೂಮಿಯಾಳದಿಂದ ಸದ್ದು ಕೇಳುತ್ತಿದೆ.
ಭೂಮಿ ನಡಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ನಾವು ಮಾಹಿತಿ ಪಡೆದುಕೊಂಡಿದ್ದೇವೆ. ಬೆಂಗಳೂರಿನಿಂದ ತಜ್ಞರನ್ನ ಕರೆಸಿ ಪರಿಶೀಲನೆ ನಡೆಸಲಾಗುವುದು. ಗ್ರಾಮಸ್ಥರು ಆತಂಕ ಪಡಬೇಕಿಲ್ಲ ಎಂದರು.