ಮುದ್ದೇಬಿಹಾಳ: ತಾಲೂಕಿನ ಬಸರಕೋಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಸಂಘ ಸ್ಥಾಪನೆಯಾದಾಗಿನಿಂದಲೂ ಒಂದು ಕುಟುಂಬದ ಹಿಡಿತದಲ್ಲಿದ್ದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಕೊನೆಗೂ 48 ವರ್ಷದ ಬಳಿಕ ಮೊದಲ ಬಾರಿಗೆ ಹೊಸಬರ ಆಯ್ಕೆ ಆಗಿದ್ದು, ಹೊಸ ಇತಿಹಾಸ ಸೃಷ್ಟಿಯಾದಂತಾಗಿದೆ.
ಹಿರಿತನಕ್ಕೆ ಒಲಿದ ಅಧ್ಯಕ್ಷ ಸ್ಥಾನ: ಸಂಘದ ಸದಸ್ಯರಲ್ಲಿ ಹಿರಿತನದ ಆಧಾರ ಮೇಲೆ ಪಕ್ಷಾತೀತವಾಗಿ ಜಿಪಂ ಮಾಜಿ ಸದಸ್ಯರಾದ ಹೇಮರೆಡ್ಡಿ ಮೇಟಿ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅಲ್ಲದೆ ಬಾಬು ಸೂಳಿಭಾವಿ ಅವರೂ ಹಿರಿತನದ ಆಧಾರದಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮೇಟಿ, ಸೂಳಿಭಾವಿ ಹಾಗೂ ನಾಡಗೌಡ ಮನೆತನಗಳ ಮುಖಂಡರು ಗುಂಡಕರ್ಜಗಿ, ಗುಡದಿನ್ನಿ, ಬಸರಕೋಡ ಹಾಗೂ ಸಿದ್ದಾಪುರದ ಹಿರಿಯರ ಸಮಕ್ಷಮದಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಆಯ್ಕೆ ಬಳಿಕ ಬೆಂಬಲಿಗರೊಂದಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರು ವಿಜಯೋತ್ಸವ ಆಚರಿಸಿದರು.
ತಾಲೂಕಿನ ಬಸರಕೋಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಹೇಮರೆಡ್ಡಿ ಬ. ಮೇಟಿ ಹಾಗೂ ಉಪಾಧ್ಯಕ್ಷರಾಗಿ ಬಾಬು ಮಲಕಪ್ಪ ಸೂಳಿಭಾವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಡಿ.ಮನಗೂಳಿ ಘೋಷಿಸಿದರು.
ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ಪಿಕೆಪಿಎಸ್ ಆಡಳಿತದ ಚುಕ್ಕಾಣಿ ಬದಲಾವಣೆಗೆ ಶತಾಯಗತಾಯು ಹೋರಾಟ ನಡೆಸಿದ್ದ ಗ್ರಾಮದ ಯುವ ಮುಖಂಡರು, ಒಂದು ಕುಟುಂಬದ ಕೈಯಲ್ಲೇ ಇದ್ದ ಆಡಳಿತವನ್ನು ಬದಲಾಯಿಸುವ ಪಣ ತೊಟ್ಟಿದ್ದರು. ಅಲ್ಲದೆ ಸಂಘದ ವ್ಯಾಪ್ತಿಯ ರೈತರೆಲ್ಲರು ಸೇರಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹಿಂದಿನ ಅಧ್ಯಕ್ಷ, ಆಡಳಿತ ಮಂಡಳಿಯವರನ್ನು ತೀವ್ರ ತರಾಟೆಗೆ ತೆಗದುಕೊಂಡಿದ್ದರಲ್ಲದೆ ಆಡಳಿತ ಮಂಡಳಿಯೇ ಅಮೂಲಾಗ್ರವಾಗಿ ಬದಲಾಗಬೇಕು ಎಂಬ ಒತ್ತಾಯವನ್ನೂ ಸಂಘದ ರೈತರು ಮಾಡಿದ್ದರು. ಇದರಿಂದ ಮೊದಲ ಬಾರಿಗೆ ಒಂದು ಕುಟುಂಬದ ಹಿಡಿತದಿಂದ ಕೈತಪ್ಪಿ ಸಂಘದ ಆಡಳಿತ ಬೇರೆಯರ ಕೈ ಸೇರಿದೆ.
ಸರ್ವ ಸಮಾಜದ ರೈತರ ಏಳ್ಗೆಗೆ ನಾನು ಶ್ರಮಿಸುತ್ತೇನೆ: ಕಳೆದ 48 ವರ್ಷಗಳ ಹಿಂದಿನಿಂದಲೂ ಒಬ್ಬರ ಹಿಡಿತದಲ್ಲಿದ್ದ ಸಂಘದ ಆಡಳಿತವನ್ನು ಬದಲಾಯಿಸುವ ಉದ್ದೇಶದಿಂದ ಹೊಸ ಆಡಳಿತ ಮಂಡಳಿ ಆಯ್ಕೆಯಾಗಿದೆ. ರೈತರ ಸಂಕಷ್ಟವನ್ನು ಕಣ್ಣಾರೆ ಕಂಡು ನೋವಾಗಿತ್ತು. ಇನ್ನು ಮುಂದೆ ಸಾಮಾನ್ಯ ಬಡ ರೈತನಿಗೂ ಸಂಘದಿಂದ ಸಹಕಾರ ಇಲಾಖೆ, ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸಲು ಶ್ರಮಿಸುತ್ತೇನೆ ಎಂದು ನೂತನ ಅಧ್ಯಕ್ಷ ಹೇಮರೆಡ್ಡಿ ಮೇಟಿ ಮಾಧ್ಯಮಗಳಿಗೆ ಹೇಳಿದರು.