ಮುದ್ದೇಬಿಹಾಳ: ಪಟ್ಟಣದಲ್ಲಿ ರಕ್ತದಾನ ಶಿಬಿರ ಆಯೋಜಿಸಿದ ಸುದ್ದಿ ತಿಳಿದ ದಾವಣಗೆರೆಯಿಂದ ಆಗಮಿಸಿದ್ದ ಮಹಡಿಮನೆ ಶಿವಕುಮಾರ್ ಎಂಬುವರು 80ನೇ ಬಾರಿ ರಕ್ತದಾನ ಮಾಡಿದರು. ಅಲ್ಲದೇ ಕೆಂಪು ಬಣ್ಣದ ಧಿರಿಸಿನಲ್ಲಿ ಕೈಯ್ಯಲ್ಲಿ ತಾವು ದಾನ ಮಾಡಿದ ರಕ್ತದ ಪ್ಯಾಕೇಟ್ ಹಿಡಿದುಕೊಂಡು ಜನರಿಗೆ ಜಾಗೃತಿ ಮೂಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಜೀವಿತಾವಧಿಯಲ್ಲಿ 80ನೇ ಬಾರಿ ರಕ್ತ ಕೊಡುತ್ತಿದ್ದೇನೆ. ರಕ್ತದಾನದಿಂದ ಅಮೂಲ್ಯ ಪ್ರಾಣ ಉಳಿಸಬಹುದು. ನನ್ನ ಸಹೋದರಿ ಬೆಂಕಿ ಅವಘಡದಲ್ಲಿ ಸುಟ್ಟುಕೊಂಡಾಗ ರಕ್ತದ ಅಗತ್ಯವಿತ್ತು. ಆಗ ನಾನು ರಕ್ತಕ್ಕಾಗಿ ಪರದಾಡಿದ ಘಟನೆ ನನ್ನ ಮನಸ್ಸನ್ನು ಕಲುಕಿತು. ಅಂದಿನಿಂದ ಜೀವ ಸಂಜೀವಿನಿಯಾಗಿರುವ ರಕ್ತದಾನ ಮಾಡುತ್ತಿದ್ದೇನೆ ಎಂದರು.
ದಿ.ಎಸ್.ಜಿ.ಪಾಟೀಲ್ ಶೃಂಗಾರ ಗೌಡ ಅವರ 2ನೇ ಪುಣ್ಯಸ್ಮರಣೆ ನಿಮಿತ್ತ ಮುದ್ದೇಬಿಹಾಳದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಮಾಹಿತಿಯನ್ನು ಪ್ರಮುಖರಾದ ಅರುಣಕುಮಾರ ಪಾಟೀಲ್, ಸುರೇಶಗೌಡ ಪಾಟೀಲ್ ಹಾಗೂ ಸಚಿನ್‌ಗೌಡ ಪಾಟೀಲ್ ಅವರಿಂದ ತಿಳಿದುಕೊಂಡು ರಕ್ತದಾನ ಮಾಡಿ ಅದರ ಮಹತ್ವ ತಿಳಿಸುವ ಕೆಲಸ ಮಾಡುತ್ತಿದ್ದೇನೆ. ರಾಜ್ಯದ ಯಾವುದೇ ಮೂಲೆಯಲ್ಲಿ ರಕ್ತದಾನ ಶಿಬಿರ ಇದೆ ಎಂಬ ಸುದ್ದಿ ತಿಳಿದರೆ ನಾನು ಹೋಗಿ ರಕ್ತದಾನ ಮಾಡುತ್ತೇನೆ ಎಂದರು.
ಇದನ್ನೂ ಓದಿ: ಬರೋಬ್ಬರಿ 117 ಬಾರಿ ರಕ್ತದಾನ ಮಾಡಿ ಗಿನ್ನೆಸ್ ದಾಖಲೆ ಮಾಡಿದ ಮಹಿಳೆ