ವಿಜಯಪುರ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಮತ್ತೊಂದು ಸಂಘರ್ಷಕ್ಕೆ ಕಾರಣಾಗುತ್ತಿದೆ. 40 ವರ್ಷಗಳಿಂದ ಕರ್ನಾಟಕ ಗಡಿಭಾಗದಲ್ಲಿರುವ ಮಹಾರಾಷ್ಟ್ರದ ಗ್ರಾಮಗಳನ್ನು ನಿರ್ಲಕ್ಷಿಸುತ್ತ ಬಂದಿದ್ದ ಮಹಾರಾಷ್ಟ್ರ ಸರ್ಕಾರಗಳು, ಈಗ ಮತ್ತೊಮ್ಮೆ ಬೆಳಗಾವಿ ನಮ್ಮದೇ ಎಂದು ಕ್ಯಾತೆ ತೆಗೆದಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಗಡಿಭಾಗದಲ್ಲಿರುವ 70ಕ್ಕೂ ಹೆಚ್ಚು ಗ್ರಾಮಗಳು ತಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಬಿಸಿ ಮುಟ್ಟಿಸಿವೆ. ಇದೀಗ ಅವರನ್ನು ನಿಯಂತ್ರಿಸಲು ಪೊಲೀಸರ ಮೂಲಕ ಮಹಾರಾಷ್ಟ್ರ ಸರ್ಕಾರ ಗ್ರಾಮದ ಮುಖಂಡರಿಗೆ ಹೊಸ ನೋಟಿಸ್ ಜಾರಿ ಮಾಡಿದೆಯಂತೆ.
ಉಟಗಿ ಗ್ರಾಮದ 17 ಜನರಿಗೆ ಮಹಾರಾಷ್ಟ್ರದ ಅಕ್ಕಲಕೋಟೆ ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಗಡಿವಿಚಾರವಾಗಿ ಪ್ರತಿಭಟನೆ ಮಾಡುವ ಮುನ್ನ ಪೊಲೀಸರ ಗಮನಕ್ಕೆ ತರಬೇಕು. ಹೂಟಗಿ ಗ್ರಾಮದವರು ಏನೇ ಸಮಸ್ಯೆಗಳು ಇದ್ದರು ಅದನ್ನು ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು ಗ್ರಾಮಸ್ಥರು ವಿರುದ್ಧ ಫರ್ಮಾನು ಹೊರಡಿಸುವ ಮೂಲಕ ಗಡಿ ಕನ್ನಡಿಗರಿಗೆ ಎಚ್ಚರಿಕೆ ನೋಟಿಸ್ ನೀಡಿದೆ.
ಸೋಮವಾರವಷ್ಟೇ ಮಹಾರಾಷ್ಟ್ರ ಸರ್ಕಾರದ ಉದ್ಯೋಗ ಮಂತ್ರಿ ಉದಯ್ ಸಾವಂತ ಗಡಿಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಗಡಿ ಗ್ರಾಮಸ್ಥರ ಮನವೊಲಿಸಲು ಮುಂದಾಗಿದ್ದರು. ಆದರೆ ಇದಕ್ಕೆ ಗ್ರಾಮಸ್ಥರು ಸೊಪ್ಪು ಹಾಕಿರಲಿಲ್ಲ. ಇದಕ್ಕೆ ಮೊದಲೇ ಮಹಾರಾಷ್ಟ್ರ ಸರ್ಕಾರ ಪೊಲೀಸ್ ನೋಟಿಸ್ ಮೂಲಕ ಗಡಿ ಕನ್ನಡಿಗರ ಬಾಯಿಮುಚ್ಚಿಸಲು ಮುಂದಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಡಿ. 2ರಂದು ಮಹಾರಾಷ್ಟ್ರ ಪೊಲೀಸರು ಕೆಲ ಗ್ರಾಮದ ಮುಖಂಡರಿಗೆ ನೋಟಿಸ್ ಜಾರಿ ಮಾಡಿದ್ದರೂ ಸಹ ಇದಕ್ಕೆ ಗಡಿಕನ್ನಡಿಗರು ಕ್ಯಾರೇ ಅಂದಿಲ್ಲ. ಈಗ ಬೆಳಗಾವಿ ನಮ್ಮದು ಎನ್ನುವ ರಾಜಕೀಯ ಅಸ್ತ್ರ ಮಹಾರಾಷ್ಟ್ರದವರಿಗೇ ತಿರುಗು ಬಾಣವಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಸಚಿವರು, ಸಂಸದರಿಗೆ ಬೆಳಗಾವಿ ಪ್ರವೇಶ ನಿಷೇಧಿಸಿ ಡಿಸಿ ಆದೇಶ
ಇನ್ನಷ್ಟು ಗ್ರಾಮಗಳ ಕರ್ನಾಟಕ್ಕೆ: ಇತ್ತ ಮಹಾರಾಷ್ಟ್ರದ ಗಡಿಭಾಗದ ಮತ್ತಷ್ಟು ಗ್ರಾಮಗಳು ತಮಗೆ ಸೌಲಭ್ಯ ನೀಡಿಲ್ಲ ಎಂದು ಆರೋಪಿಸಿ ತಮ್ಮ ಗ್ರಾಮಗಳನ್ನು ಸಹ ಕರ್ನಾಟಕಕ್ಕೆ ಸೇರಿಸಿಕೊಳ್ಳಿ ಎಂದು ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದು ಸೋಲಾಪುರ ಜಿಲ್ಲಾಧಿಕಾರಿ ಮೂಲಕ ಕಳುಹಿಸಿದ್ದಾರೆ.
ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಆಕ್ಕಲಕೋಟ ತಾಲೂಕಿನ 11 ಗ್ರಾಮ ಪಂಚಾಯಿತಿಗಳು ಕರ್ನಾಟಕಕ್ಕೆ ಸೇರಿಸಲು ಮನವಿ ಮಾಡಿಕೊಂಡಿವೆ. ಗ್ರಾಮ ಪಂಚಾಯಿತಿಯಲ್ಲಿ ಠರಾವ್ ಪಾಸ್ ಮಾಡಿ ಡಿಸಿಗೆ ಗಡಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಅಕ್ಕಲಕೋಟ ತಾಲೂಕಿನ ಆಳಗೆ, ಶೇಗಾಂವ್, ಕಲ್ಲಕರ್ಜಾಳ, ಧಾರಸಂಗ, ಕೆಗಾಂವ್, ದೇವಿಕವಟಾ, ಶಾವಳ, ಹಿಳ್ಳಿ, ಅಂದೇವಾಡಿ, ಪಾನ್ ಮಂಗರುಳ, ಕೋರ್ಸೆಗಾಂವ್ ಸೇರಿದಂತೆ ಹಲವು ಹಳ್ಳಿಯ ಜನರು ಸೊಲಾಪುರ ಜಿಲ್ಲಾಧಿಕಾರಿಗೆ ಠರಾವು ಪ್ರತಿ ನೀಡಿ ಮನವಿ ಸಲ್ಲಿಸಿದ್ದಾರೆ.
ಅಕ್ಕಲಕೋಟೆ ತಾಲೂಕಿನ ಇನ್ನೂ 50 ಗ್ರಾಮ ಪಂಚಾಯಿತಿಗಳು ಠರಾವು ಪಾಸು ಮಾಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧರಿಸಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಸಚಿವದ್ವಯರ ಬೆಳಗಾವಿ ಭೇಟಿ ರದ್ದು