ವಿಜಯಪುರ : ಮನೆ ಕಟ್ಟಲು ಅನುಮತಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆಯುವಾಗ ಚಡಚಣ ಪಟ್ಟಣ ಪಂಚಾಯಿತಿಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ತನಿಖಾಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಜ್ಯೂನಿಯರ್ ಪ್ರೋಗ್ರಾಮರ್ ನಾಗರಾಜ್ ಅಶೋಕ ಕುಲಕರ್ಣಿ ಹಾಗೂ ದ್ವಿತೀಯ ದರ್ಜೆ ನೌಕರ ಶಿವಾನಂದ ಕಲ್ಲಪ್ಪ ಜಂಗಲಗಿ ಎಂಬವರನ್ನು ಬಂಧಿಸಲಾಗಿದೆ.
ಇವರು ವ್ಯಕ್ತಿಯೊಬ್ಬರಿಗೆ ಮನೆ ಕಟ್ಟುವ ಪರವಾನಗಿ ಪತ್ರ ನೀಡಲು ಒಂದನೇ ಅಂತಸ್ತಿಗೆ 20 ಸಾವಿರ ರೂಪಾಯಿ ಲಂಚ ಪಡೆದುಕೊಂಡಿದ್ದರು. ಮತ್ತೆ 7 ಸಾವಿರ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ವ್ಯಕ್ತಿಯೊಬ್ಬರು ವಿಜಯಪುರ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದರು.
ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಶನಿವಾರ ಚಡಚಣ ಪಟ್ಟಣ ಪಂಚಾಯತಿ ಹೊರಗಡೆ ಇಬ್ಬರು ಅಧಿಕಾರಿಗಳು ದೂರುದಾರರಿಂದ ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿ ಹಣದ ಸಮೇತ ಸೆರೆ ಹಿಡಿದಿದ್ದಾರೆ. ಆರೋಪಿಗಳ ವಿರುದ್ಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚುನಾವಣಾ ಆಯೋಗದ ಭರ್ಜರಿ ಬೇಟೆ: ₹9.29 ಕೋಟಿ ಮೌಲ್ಯದ ನಗದು, ವಸ್ತುಗಳ ಜಪ್ತಿ
ವಿಕಲಚೇತನ ಸಬಲೀಕರಣ ಅಧಿಕಾರಿ ಬಲೆಗೆ: ಗೌರವಧನ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ ಕಲಬುರಗಿ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾಧಿಕಾರಿ ವೆಂಕಟೇಶ ದೇಶಪಾಂಡೆ ಸೇರಿ ಮೂವರ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಶುಕ್ರವಾರ ಸಂಜೆ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಅಧಿಕಾರಿ ವೆಂಕಟೇಶ ದೇಶಪಾಂಡೆ, ಜೇವರ್ಗಿ ತಾಲೂಕಿನ ವಿವಿದೋದ್ದೇಶ ಪುನರ್ವಸತಿ ಅಧಿಕಾರಿ ನಾನಾಗೌಡ ಹೊನ್ನಳ್ಳಿ, ಕಚೇರಿಯ ಎಫ್‌ಡಿಸಿ ಅಂಬರೇಶ ನಾಯಕ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಯಡ್ರಾಮಿ ತಾಲೂಕಿನ ಕರಕಿಹಳ್ಳಿ ಗ್ರಾಮಪಂಚಾಯತ್ ಗ್ರಾಮೀಣ ವಿಕಲಚೇತನ ಪುನರ್ವಸತಿ ಕಾರ್ಯಕರ್ತರಾಗಿರುವ ಗುರುರಾಜ ಹೇರೂರ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಗುರುರಾಜ ಅವರು ವಿಕಲಚೇತನರಾಗಿದ್ದು, ಇತರ ವಿಕಲಚೇತನರ ಪುನರ್ವಸತಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವಿಕಲಚೇತನರಿಗೆ ಸರ್ಕಾರವು ತಿಂಗಳಿಗೆ 9 ಸಾವಿರ ರೂ. ಗೌರವ ಧನ ನೀಡುತ್ತದೆ. ತನ್ನ 8 ತಿಂಗಳ ಗೌರವಧನವನ್ನು ಮಂಜೂರು ಮಾಡಲು ಅಧಿಕಾರಿಗಳ ಬಳಿ ಕೇಳಿದ್ದರು. ಅಧಿಕಾರಿಗಳು 10 ಸಾವಿರ ರೂಪಾಯಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು.
ಇದನ್ನೂ ಓದಿ: ವಿಷಾಹಾರ ಸೇವನೆ: ವಸತಿ ಶಾಲೆಯ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು