ಮುದ್ದೇಬಿಹಾಳ : ತಾಲೂಕಿನ ಕಾಳಗಿ ಗ್ರಾಪಂನ ಪಿಡಿಒ ಅವರು ಜನರಿಗೆ ಅನಧಿಕೃತ ಭೂಮಾಪಕ ನಕ್ಷೆ ತೋರಿಸಿ ಡಾಂಬರ್ ರಸ್ತೆ ಅತಿಕ್ರಮಣ ಮಾಡಿಕೊಂಡಿದ್ದೀರಿ ಎಂದು ನೋಟಿಸ್ ನೀಡಿದ್ದಾರೆ. ಅದನ್ನು ರದ್ದುಪಡಿಸಬೇಕು ಎಂದು ಕೋರಿ ತಾಲೂಕಿನ ಕಾಳಗಿ ಗ್ರಾಮದ ನಿವಾಸಿಗಳು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಕಾಳಗಿ ಗ್ರಾಪಂ ಪಿಡಿಒ, ಸೆ.19ರೊಳಗೆ ತಾವು ವಾಸಿಸುತ್ತಿರುವ ಮನೆಗಳನ್ನು ತೆರವುಗೊಳಿಸಬೇಕು ಎಂದು ನೋಟಿಸ್ ನೀಡಿದ್ದಾರೆ. ಉಲ್ಲೇಖಿಸಿದ ಕಾಳಗಿ-ಹುಲ್ಲೂರ ಡಾಂಬರ್ ರಸ್ತೆ ಅತಿಕ್ರಮಿಸಿಕೊಂಡಿದ್ದೀರಿ ಮತ್ತು ಸದರಿ ರಸ್ತೆಯು 176 ಸರ್ವೆ ನಂಬರಿನವರಿಗೆ ಮೂಲ ರಸ್ತೆ ಇದೆ ಎಂದು ತಿಳಿಸಿದ್ದಾರೆ.
ಆದರೆ, ಪಿಡಿಒ ಆರೋಪಿಸುತ್ತಿರುವಂತೆ 176 ಸರ್ವೆ ನಂಬರಿನ ಜಮೀನುಗಳಿಗೆ ಮತ್ತು ಕಾಳಗಿ-ಹುಲ್ಲೂರ ಸುಮಾರು 30 ಮೀಟರ್ ಅಂತರವಿದ್ದು, 176 ಸರ್ವೆ ನಂಬರಿನಲ್ಲಿ ವಾಸಿಸುತ್ತಿರುವವರು ಕಾಳಗಿ-ಹುಲ್ಲೂರ ಡಾಂಬರ್ ರಸ್ತೆ ಅತಿಕ್ರಮಣ ಮಾಡಿಕೊಂಡಿರುವುದಿಲ್ಲ.176ರ ಸರ್ವೆ ನಂಬರಿನ ಸರ್ಕಾರಿ ಪ್ರೌಢಶಾಲೆಗೆ ತೆರಳಲು ಯಾವುದೇ ತೊಂದರೆ ಇಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
1986-87ರಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಸರ್ಕಾರ ಹಕ್ಕು ಪತ್ರ ನೀಡಿದೆ. ಸದರಿ ಜಾಗದಲ್ಲಿ ಯಾರೂ ಅನಧಿಕೃತ ವಾಸ ಮಾಡುತ್ತಿರುವುದಿಲ್ಲ ಎಂದು ತಿಳಿಸಿದ್ದಾರೆ. ಸರ್ಕಾರಕ್ಕೆ ಈಗಾಗಲೇ ಮುಖ್ಯ ರಸ್ತೆ ಮತ್ತು ಮುಖ್ಯ ಕಾಲುವೆಗೆ ಜಮೀನು ಬಿಟ್ಟುಕೊಟ್ಟಿರುತ್ತೇವೆ. ಕಳೆದ 20-30 ವರ್ಷಗಳಿಂದ ನಾವು ವಾಸಿಸುತ್ತಿರುವ ಜಾಗದಿಂದ ನಮ್ಮನ್ನು ತೆರವುಗೊಳಿಸಿದರೆ 50ಕ್ಕೂ ಹೆಚ್ಚು ಕುಟುಂಬದವರು ಸಾಮೂಹಿಕ ಆತ್ಮಹತ್ಯೆಗೆ ಮುಂದಾಗುವುದಾಗಿ ತಿಳಿಸಿದ್ದಾರೆ.
ಮನವಿ ಪತ್ರವನ್ನು ಶಿರಸ್ತೇದಾರ್ ವೀರೇಶ್ ತೊನಶ್ಯಾಳ ಅವರಿಗೆ ಸಲ್ಲಿಸಿದರು. ಗ್ರಾಮಸ್ಥರಾದ ಹುಸೇನ್ ಮುಲ್ಲಾ, ಹುಲ್ಲಪ್ಪ ಮಾದರ,ದುಂಡಪ್ಪ ಅಂಬಿಗೇರ,ಹುಸೇನಸಾಬ್ ಬೆಣ್ಣೂರ ಮೊದಲಾದವರು ಮನವಿ ಪತ್ರಕ್ಕೆ ಸಹಿ ಮಾಡಿದ್ದಾರೆ.