ವಿಜಯಪುರ : ಎರಡು ಅವಧಿಯ 10 ವರ್ಷದ ಸಂಸದನಾಗಿ ಜಿಲ್ಲೆಯಲ್ಲಿ ಮೂರು ಯೋಜನೆಗಳನ್ನು ಪೂರ್ಣಗೊಳಿಸಿದ್ದೇನೆ. ಈ ಯೋಜನೆ ಉದ್ಘಾಟನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕರೆಸುವ ಆಸೆ ಇದ್ದು, ಅದಕ್ಕಾಗಿ ಈಗಾಗಲೇ ಪ್ರಧಾನಿ ಕಚೇರಿಗೆ ಪತ್ರ ಬರೆದು ಸಮಯ ನೀಡುವಂತೆ ಕೋರಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದ ಇಬ್ರಾಹಿಂಪುರ ರೈಲ್ವೆ ಸ್ಟೇಶನ್ ಸಮೀಪದ ಎಲ್ಸಿ ಗೇಟ್ -80 ಬದಲಿಗೆ ನಿರ್ಮಿಸಿರುವ ಮೇಲ್ಸೇತುವೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ತನ್ನ 10 ವರ್ಷದ ಅವಧಿಯಲ್ಲಿ ಕೂಡಗಿ ವಿದ್ಯುತ್ ಸ್ಥಾವರ, ವಿಜಯಪುರ- ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಹಾಗೂ ಗದಗ- ಹುಟಗಿ ರೈಲ್ವೆ ಮಾರ್ಗದ ಡಬ್ಲಿಂಗ್ ಯೋಜನೆ ಪೂರ್ಣಗೊಳಿಸಿದ್ದೇನೆ. ಇದಕ್ಕಾಗಿ ಕೇಂದ್ರದಿಂದ 36 ಸಾವಿರ ಕೋಟಿ ರೂ. ಹಣ ತಂದಿದ್ದೇನೆ. ಇಷ್ಟು ದೊಡ್ಡ ಮಟ್ಟದ ಹಣ ಜಿಲ್ಲೆಗೆ ಬಂದಿರುವುದು ನನ್ನ ಅವಧಿಯಲ್ಲಿ ಮಾತ್ರ. ಕೆಲವರು ಏನು ಕೆಲಸ ಮಾಡಿದ್ದಾರೆ ಎಂದು ಟೀಕಿಸುತ್ತಾರೆ. ಅವರಿಗೆ ಈ ಕಾಮಗಾರಿಗಳೇ ಉತ್ತರವಾಗಿದೆ. ವಿಜಯಪುರಕ್ಕೆ ಈ ಹಿಂದೆ ಒಂದು ನೈಯಾ ಪೈಸೆ ಬಿಡುಗಡೆಯಾಗಿಲ್ಲ. ಹಾಗಾದರೆ ಹಿಂದೆ ಸಂಸದರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಕಾಮಗಾರಿ ಮಂಜೂರು ಮಾಡಲು, ಅದಕ್ಕೆ ಹಣ ಬಿಡುಗಡೆ ಮಾಡಲು ದೆಹಲಿಯಲ್ಲಿ ಫೈಲ್ ತೆಗೆದುಕೊಂಡು ಹೋಗಿ ಚಪ್ಪಲಿ ಹರಿಯುವಷ್ಟು ಸುತ್ತಾಡಿದ ಮೇಲೆ ಈ ಯೋಜನೆಗಳು ಆಗಿವೆ. ಇದು ನಾನು ನಿಮಗೆ ಉಪಕಾರ ಮಾಡಿದ್ದೇನೆ ಎಂದು ತಿಳಿದುಕೊಳ್ಳಬೇಡಿ, ನೀವು ಓಟ್ ಹಾಕಿ ದೆಹಲಿಗೆ ಕಳುಹಿಸಿದ್ದಕ್ಕೆ ಈ ಕೆಲಸ ಮಾಡಿದ್ದೇನೆ. ಇದರಲ್ಲಿ ನಾನು ಯಾವುದೇ ಉಪಕಾರ ಮಾಡಿಲ್ಲ. ಕೆಲ ನನ್ನ ವಿರೋಧಿಗಳು ಜಿಗಜಿಣಗಿ ಏನು ಕೆಲಸ ಮಾಡಿಲ್ಲ ಎಂದು ಹೇಳುತ್ತಿದ್ದರು, ಜನ ನನ್ನನ್ನು ಬೈದಿದ್ದೂ ಉಂಟು. ಆದರೂ ಚುನಾವಣೆಯಲ್ಲಿ ಕೊನೆಗೆ ನನಗೆ ಓಟು ಹಾಕುತ್ತಾರೆ ಎಂದು ಹೇಳಿದರು.
ಯತ್ನಾಳ್ ಗೈರು: ಮೇಲ್ಸೇತುವೆ ಉದ್ಘಾಟನೆಯ ಅಧ್ಯಕ್ಷತೆ ವಹಿಸಬೇಕಾಗಿದ್ದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಾರ್ಯಕ್ರಮದಲ್ಲಿ ಗೈರಾಗಿದ್ದರು. ಯತ್ನಾಳ್ ರಾಜಕೀಯ ವಿರೋಧಿಯಾಗಿರುವ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.