ವಿಜಯಪುರ: ಕೊರೊನಾದಿಂದ ಸಾವು ಬದುಕಿನ ಮಧ್ಯೆ ಹೋರಾಡಿ, ಎಲ್ಲರ ಆಶೀರ್ವಾದದಿಂದ ಮರುಜನ್ಮ ಪಡೆದು ವಾಪಸ್ ಬಂದಿದ್ದೇನೆ. ನನ್ನ ಕ್ಷೇತ್ರ ನಾಗಠಾಣದಲ್ಲಿ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಮುಂದಿನ ಚುನಾವಣೆಯಲ್ಲಿ ನನಗೆ ಟಿಕೇಟ್ ನೀಡಲಿ ಅಥವಾ ಬಿಡಲಿ.. ಸ್ಪರ್ಧಿಸುವ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪುತ್ರ ಹಾಗೂ ಬಿಜೆಪಿ ಮುಖಂಡ ಗೋಪಾಲ ಕಾರಜೋಳ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸುಮಾರು ಎರಡು ತಿಂಗಳು ಕೋಮಾಗೆ ಜಾರಿದ್ದೆ. ಆ ಎರಡು ತಿಂಗಳಲ್ಲಿ ಏನಾಯಿತು ಒಂದೂ ನೆನಪಿಲ್ಲ. ಇಷ್ಟು ದೀರ್ಘಕಾಲದವರೆಗೆ ಕೋಮಾದಲ್ಲಿದ್ದರೆ ನೆನಪಿನ ಶಕ್ತಿ ಹೋಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ನನಗೆ ಹಾಗೆ ಆಗಲಿಲ್ಲ. ಆರೋಗ್ಯವಾಗಿ ನಿಮ್ಮ ಮುಂದೆ ಬಂದಿದ್ದೇನೆ. ನನ್ನ ಕ್ಷೇತ್ರದ ಜನರ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನಗೆ ನಾಗಠಾಣ ಕ್ಷೇತ್ರಕ್ಕೆ ಕೊನೆಯ ಗಳಿಗೆಯಲ್ಲಿ ಟಿಕೆಟ್ ನೀಡಿದ ಕಾರಣ ಸೋಲು ಅನುಭವಿಸಬೇಕಾಯಿತು. ಈ ಬಾರಿ ನನಗಾಗಲಿ, ಬೇರೆ ಯಾವ ಅರ್ಹ ಅಭ್ಯರ್ಥಿಗೆ ಬೇಗ ಟಿಕೆಟ್ ನೀಡಿದರೆ ಗೆಲುವು ಸಾಧ್ಯವಾಗುತ್ತದೆ. ಈ ಬಗ್ಗೆ ಬಿಜೆಪಿ ಹೈಕಮಾಂಡ್ಗೆ ಮನವಿ ಮಾಡುವುದಾಗಿ ತಿಳಿಸಿದರು.
ಅನುದಾನದಲ್ಲಿ ತಾರತಮ್ಯ ಮಾಡಿಲ್ಲ: ನಾಗಠಾಣ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಶಾಸಕನಾಗಿರುವ ಕಾರಣ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂಬ ಶಾಸಕ ದೇವಾನಂದ ಚೌಹಾಣ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ದಾಖಲೆ ಇಟ್ಟುಕೊಂಡು ಆರೋಪ ಮಾಡಲಿ. ಅದಕ್ಕೆ ನಾನು ಉತ್ತರಿಸುತ್ತೇನೆ ಎಂದು ಸವಾಲು ಹಾಕಿದರು.