ಮುದ್ದೇಬಿಹಾಳ: ಭಾರೀ ಮಳೆ ಸುರಿದ ಪರಿಣಾಮ ತಾಲೂಕಿನ ಬಿಜ್ಜೂರ ಹಾಗೂ ನಾಲತವಾಡದಲ್ಲಿ ಪ್ರತ್ಯೇಕವಾಗಿ ಮನೆ ಹಾಗೂ ಛಾವಣಿ ಧರೆಗುರುಳಿದ ಘಟನೆ ನಡೆದಿದೆ.
ತಾಲೂಕಿನ ಬಿಜ್ಜೂರ ಗ್ರಾಮದ ಹಣಮವ್ವ ಮಲ್ಲಪ್ಪ ಬಿರಾದಾರ ಎಂಬುವರ ಮನೆ ಮಳೆಗೆ ಕುಸಿದಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಮಣ್ಣಿನ ಛಾವಣಿ ಇದ್ದ ಕಾರಣ ತೇವಗೊಂಡು ಭಾರ ತಾಳದೆ ಧರೆಗುರುಳಿದೆ ಎನ್ನಲಾಗಿದೆ. ಕುಟುಂಬದ ಸದಸ್ಯರು ಪಕ್ಕದಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡು ವಾಸಿಸುತ್ತಿದ್ದರು. ಇದರಿಂದ ಅನಾಹುತ ತಪ್ಪಿದಂತಾಗಿದೆ.
ಇನ್ನು ನಾಲತವಾಡದ ಪಟ್ಟಣದಲ್ಲಿ ನೇಕಾರ ಕುಟುಂಬದ ಪಾರ್ವತವ್ವ ರುದ್ರಗಂಟಿ ಎಂಬುವರ ಮನೆಯ ಗೋಡೆ ಕುಸಿದಿದ್ದು, ಛಾವಣಿಯ ಜಂತಿ ಮುರಿದಿದೆ. ಪ್ರತ್ಯೇಕ ಘಟನೆಗಳಲ್ಲಿ ಮನೆಗಳಿಗೆ ಹಾನಿ ಆಗಿರುವ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿರುವ ಕುಟುಂಬದ ಸದಸ್ಯರು, ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ.