ವಿಜಯಪುರ: ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗಿದೆ. ಪರಿಣಾಮ ಇಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಈಗಾಗಲೇ ಸುಮಾರು 1.50 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಭೀಮಾ ನದಿಗೆ ಹರಿದು ಬಂದಿದೆ. ಇಂದು ಸಂಜೆಯ ವೇಳೆಗೆ ನೀರಿನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಕ್ಷಣಕ್ಷಣಕ್ಕೂ ಭೀಮಾ ನದಿ ನೀರಿನ ಮಟ್ಟ ಏರತೊಡಗಿದೆ. ಸಹಜವಾಗಿಯೇ ನದಿತೀರದ ಗ್ರಾಮಸ್ಥರು ಆತಂಕ ಗೊಂಡಿದ್ದಾರೆ. ಭೀಮಾನದಿಯಲ್ಲಿ ಬಿಟ್ಟಿದ್ದ ವಿದ್ಯುತ್ ಪಂಪ್ಸೆಟ್ಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಹೊಲದ ಮಾಲೀಕರು ಪರದಾಡುವಂತಾಗಿದೆ. ಕಬ್ಬು, ಬಾಳೆ ತೋಟಗಳಿಗೂ ನೀರು ನುಗ್ಗಿದ್ದು, ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಉಮರಾಣಿ-ಲಂವಗಿ ಬ್ಯಾರೇಜ್ ಮುಳುಗಿದೆ. ಕರ್ನಾಟಕ-ಮಹಾರಾಷ್ಟ್ರ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಬಸವನಬಾಗೇವಾಡಿ ತಾಲೂಕಿನ ಅರಳಿಚಂಡಿ ಗ್ರಾಮದಲ್ಲಿ ಹಳ್ಳ ತುಂಬಿ ಹರಿಯುತ್ತಿದೆ. ಗ್ರಾಮದ ಮಧ್ಯೆ ತಗ್ಗು ಪ್ರದೇಶಗಳಲ್ಲಿ ಅಪಾರ ಪ್ರಮಾಣದ ನೀರು ನುಗ್ಗಿ ಗ್ರಾಮ ಎರಡು ಭಾಗವಾಗಿ ಮಾರ್ಪಟ್ಟಿದೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ ನದಿ ನೀರಿನಿಂದ ಸಿಂದಗಿ ತಾಲೂಕಿನ ಆಲಮೇಲ ಬಳಿಯ ತಾರಾಪುರ ಸಂಪೂರ್ಣ ಜಲಾವೃತಗೊಂಡಿದೆ. ಗ್ರಾಮಕ್ಕೆ ಹೊರಜಗತ್ತಿನ ಸಂಪರ್ಕವಿಲ್ಲದಾಗಿದೆ. ತಾರಾಪುರ, ತಾವರಖೇಡ, ಬ್ಯಾಡಗಿಹಾಳ, ದೇವಣಗಾಂವ, ಕಡ್ಲೇವಾಡ, ಶಂಬೇವಾಡ ಗ್ರಾಮಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ.
ದೇವಣಗಾಂವ ಸಮೀಪದ ಕಲಬುರಗಿ ಜಿಲ್ಲೆಯ ಸೊನ್ನ ಬ್ಯಾರೇಜ್ನಿಂದ 2,26,630 ಲಕ್ಷ ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ದೇವಣಗಾಂವ ಸೇತುವೆಯ ಮಾಪನ ಪಟ್ಟಿಯಲ್ಲಿ 8 ಮೀಟರ್ ನೀರು ಹರಿಯುತ್ತಿದೆ. 8 ಮೀ. ಗಿಂತಲೂ ಹೆಚ್ಚು ನೀರು ಹರಿದರೆ ಅದು ಅಪಾಯದ ಮಟ್ಟ ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಉಜನಿ ಜಲಾಶಯದಿಂದ 1.8 ಲಕ್ಷ ಕ್ಯೂಸೆಕ್ ನೀರನ್ನು ಸೊನ್ನ ನದಿಗೆ ಹರಿಸಲಾಗಿದೆ ಎಂಬ ಮಾಹಿತಿ ಮಹಾರಾಷ್ಟ್ರ ಸರ್ಕಾರದಿಂದ ಬಂದಿದೆ.