ವಿಜಯಪುರ: ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಕಿಡಿಕಾರಿದ ಪ್ರಸಂಗ ನಡೆದಿದೆ. ಜೆಡಿಎಸ್ ಒಂದು ರಾಜಕೀಯ ಪಕ್ಷವೇ ಅಲ್ಲ ಎಂದು ಸಿದ್ಧರಾಮಯ್ಯ ಹೇಳಿಕೆ ವಿಚಾರವಾಗಿ ಅವರು ತಿರುಗೇಟು ನೀಡಿದ್ದಾರೆ.
ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದಲ್ಲಿ ನಡೆದ ಮಡಿವಾಳೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ವೇಳೆ ಮಾತನಾಡಿದ ಅವರು, ಸಿದ್ಧರಾಮಯ್ಯ ಅವರಿಂದ ನಮಗೆ ಸರ್ಟಿಫಿಕೇಟ್ ಬೇಕಾಗಿಲ್ಲ, ಅವರು ಕಾಂಗ್ರೆಸ್ ನೆರಳಲ್ಲಿದ್ದಾರೆ ಎಂದು ಲೇವಡಿ ಮಾಡಿದರು.
ಸ್ವಂತ ಪಕ್ಷ ಕಟ್ಟಿ ಚುನಾವಣೆ ನಡೆಸಲಿ, ಆಗ ಅವರ ಮಾತಿಗೆ ಉತ್ತರಿಸುತ್ತೇನೆ. ಅವರು ಸ್ವತಂತ್ರವಾಗಿ ಹೋರಾಟ ಮಾಡಿದವರಲ್ಲ ಎಂದು ಟೀಕಿಸಿದರು.
ಯಾರೋ ದುಡಿಮೆ ಮಾಡಿರ್ತಾರೆ, ಆ ದುಡಿಮೆಯ ಫಲವನ್ನು ಇವರು ಅನುಭವಿಸಿ ರಾಜಕೀಯ ಮಾಡುತ್ತಿದ್ದಾರೆ. ಸ್ವಂತ ಶಕ್ತಿ ಮೇಲೆ ಸಿದ್ಧರಾಮಯ್ಯ ರಾಜಕಾರಣ ಮಾಡಿಲ್ಲ ಎಂದು ಹೇಳಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪಕ್ಷ ಸಂಘಟನೆಗೆ ಚಾಲನೆ ನೀಡಲಾಗುತ್ತಿದೆ. ಈಗಾಗಲೇ ವೀಕ್ಷಕರನ್ನು ನೇಮಕ ಮಾಡಲಾಗಿದೆ. ವೀಕ್ಷಕರ ಮುಖಾಂತರ ಪದಾಧಿಕಾರಿಗಳ ಬದಲಾವಣೆ ಸೇರಿದಂತೆ ಪಕ್ಷದಲ್ಲಿ ಹಲವು ಬದಲಾವಣೆ ಮಾಡಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರವಾಸ ಮಾಡಿ, ಈ ಭಾಗದ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಕೆಲಸ ಮಾಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.