ಮುದ್ದೇಬಿಹಾಳ(ವಿಜಯಪುರ): ಸರ್ಕಾರಿ ಶಾಲೆ ಹಾಗೂ ವಸತಿ ನಿಲಯದಲ್ಲಿ ಓದಿ ವಿದ್ಯಾರ್ಥಿಯೊಬ್ಬ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 619 ಅಂಕಗಳನ್ನು ಗಳಿಸುವ ಮೂಲಕ ಜಿಲ್ಲೆಗೆ 2ನೇ ಸ್ಥಾನ ಪಡೆದಿದ್ದಾನೆ. ಸರ್ಕಾರಿ ಶಾಲೆ ಹಾಗೂ ಸರ್ಕಾರಿ ವಸತಿ ಗೃಹ ಎಂದರೆ ಮೂಗು ಮುರಿಯದೇ ಓದಬೇಕು ಅಂತಾನೆ ಈ ವಿದ್ಯಾರ್ಥಿ. ಅಷ್ಟೇ ಅಲ್ಲ ಸರ್ಕಾರಿ ಶಾಲೆಯ ಶಿಕ್ಷಣ ಎಲ್ಲ ಶಿಕ್ಷಣ ವ್ಯವಸ್ಥೆಗೂ ಮಾದರಿ ಎಂದೂ ಅಭಿಪ್ರಾಯಪಟ್ಟಿದ್ದಾನೆ.
ಬಿದರಕುಂದಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಮಂಜುನಾಥ ನಾಡಗೌಡ, ಸರ್ಕಾರಿ ವಸತಿಗೃಹದಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡಿ ಜಿಲ್ಲೆಗೆ, ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿ ತಂದಿದ್ದಾನೆ.
ವಿದ್ಯಾಲಯದ ಮುಖ್ಯ ಗುರುಮಾತೆ ಎನ್. ಬಿ. ತೆಗ್ಗಿನಮಠ ಮಾತನಾಡಿ, ಈ ಬಾರಿಯ ಫಲಿತಾಂಶದಿಂದ ನಮ್ಮ ಶಾಲೆಗೆ ಕೀರ್ತಿ ಹೆಚ್ಚಿದೆ. ಅಲ್ಲದೇ ಜಿಲ್ಲೆಯಲ್ಲೂ ಆದರ್ಶ ವಿದ್ಯಾಲಯಗಳಲ್ಲಿ ದೊರೆಯುವ ಶಿಕ್ಷಣದ ಬಗ್ಗೆ ಪಾಲಕರಿಗೆ ವಿಶ್ವಾಸ ಮೂಡುವಂತಾಗಿದೆ. ಮಂಜುನಾಥ ಓದಿನಲ್ಲಿ ಚುರುಕಾಗಿದ್ದ. ಅಲ್ಲದೇ, ಇತರ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಆದರ್ಶ ವಿದ್ಯಾಲಯದ ಪರವಾಗಿ ಎಲ್ಲರಿಗೂ ಅಭಿನಂದನೆಗಳನ್ನು ಹೇಳುವುದಾಗಿ ತಿಳಿಸಿದರು.
ವಿದ್ಯಾರ್ಥಿಯ ತಂದೆ ಸೋಮಶೇಖರ ನಾಡಗೌಡ ಮಾತನಾಡಿ, ಲಾಕ್‌ಡೌನ್ ಅವಧಿಯಲ್ಲಿ ಓದಿಗೆ ಅಲ್ಪ ಹಿನ್ನಡೆಯಾಗಿದ್ದು, ಬಿಟ್ಟರೆ ಎಲ್ಲ ವಿಷಯಗಳಲ್ಲೂ ಉತ್ತಮ ಫಲಿತಾಂಶವನ್ನು ನನ್ನ ಮಗ ಪಡೆದುಕೊಂಡಿದ್ದಾನೆ. ಇದಕ್ಕೆಲ್ಲ ಸ್ಪೂರ್ತಿ ಆರ್‌ಎಂಎಸ್‌ಎ ವಿದ್ಯಾಲಯದ ಶಿಕ್ಷಕವೃಂದ ಎಂದು ಹೇಳಿದರು.
ಜಿಲ್ಲೆಗೆ ಎರಡನೇ ಸ್ಥಾನ ಪಡೆದುಕೊಂಡ ವಿದ್ಯಾರ್ಥಿ ಮಂಜುನಾಥ ನಾಡಗೌಡ ಹಾಗೂ ಅವರ ತಂದೆ ಸೋಮಶೇಖರ ನಾಡಗೌಡ ಅವರನ್ನು ಬಿಇಒ ವೀರೇಶ ಜೇವರಗಿ ಶಿಕ್ಷಣ ಇಲಾಖೆಯ ಪರವಾಗಿ ಸನ್ಮಾನಿಸಿದರು.